ಮೈಸೂರು ಜಿಲ್ಲೆಯಲ್ಲಿ ಪ್ರವಾಹ ಭೀತಿ: ಜನ ಜಾನುವಾರುಗಳ ರಕ್ಷಣೆಗೆ ತಕ್ಷಣವೇ ಕ್ರಮ ಕೈಗೊಳ್ಳಿ- ಉಸ್ತುವಾರಿ ಕಾರ್ಯದರ್ಶಿ

Update: 2020-08-07 17:24 GMT

ಮೈಸೂರು, ಆ.7: ಮೈಸೂರು ಜಿಲ್ಲೆಯಲ್ಲಿ ಪ್ರವಾಹ ಆರಂಭವಾಗಿರುವ ಹಿನ್ನೆಲೆಯಲ್ಲಿ ಜನ ಮತ್ತು ಜಾನುವಾರುಗಳ ರಕ್ಷಣೆಗೆ ತಕ್ಷಣವೇ ಕ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಮ್ ಅವರು ಶುಕ್ರವಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರವಾಹ ಮತ್ತು ಕೊವೀಡ್ ಹಿನ್ನೆಲೆಯಲ್ಲಿ ವಿಕೋಪ ನಿರ್ವಹಣೆ ಕುರಿತು ಮೈಸೂರು ಜಿಲ್ಲಾ ಪಂಚಾಯತ್ ಕಚೇರಿಯಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ತಾಲ್ಲೂಕು ಟಾಸ್ಕ್ ಪೋರ್ಸ್ ಅಧಿಕಾರಿಗಳ ಪ್ರಗತಿ ಪರಿಶೀಲನೆ ಮಾಡಿದರು.

ಮುಂದಿನ ಒಂದೆರೆಡು ವಾರಗಳ ಕಾಲ ಹೆಚ್ಚಿನ ಮಳೆಯಾಗುವ ಮಾಹಿತಿ ಇರುವುದರಿಂದ ಯಾವುದೇ ಕ್ಷಣದಲ್ಲಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಬಹುದು. ಅಲ್ಲಿ ವರೆಗೂ ಕಾಯುವ ಬದಲು ಈಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮವಹಿಸಬೇಕು ಎಂದರು. ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಎಲ್ಲಾ ತಾಲ್ಲೂಕುಗಳಿಗೂ ನೋಡಲ್ ಅಧಿಕಾರಿಗಳಾಗಿ ನಿಯೋಜಿಸಲಾಗಿದೆ. ಅವರು ಆಗಾಗ್ಗೆ ತಾಲ್ಲೂಕುಗಳಿಗೆ ಭೇಟಿ ನೀಡಿ, ನಿರ್ವಹಣೆ ಮಾಡಬೇಕು ಎಂದರು.

ಜನರಿಗೆ ಪರಿಹಾರ ಕೇಂದ್ರಗಳನ್ನು ತೆರೆಯಬೇಕು. ಜಾನುವಾರುಗಳಿಗೆ ಗೋಶಾಲೆಗಳನ್ನು ಮಾಡಬೇಕು. ಹಾಲುಣಿಸುವ ಹಸುಗಳಿದ್ದರೆ ದೂರದಲ್ಲಿ ಗೋಶಾಲೆ ಮಾಡುವುದರಿಂದ ಸಮಸ್ಯೆಯಾಗುತ್ತದೆ. ಹಾಗಾಗಿ ಗ್ರಾಮದ ಹತ್ತಿರವೇ ಗೋಶಾಲೆ ಮಾಡಿ ಎಂದರು.  ಹಿಂದಿನ ವರ್ಷಗಳಲ್ಲಿ ನೀರು ನುಗ್ಗಿದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರಿಕೆ ಬೇಕಾಗುತ್ತದೆ. ಸ್ಥಳೀಯ ಶಾಸಕರು, ಸಂಸದರಿಗೆ ಮಾಹಿತಿ ನೀಡಿ ಸಹಕಾರ ಪಡೆಯಬೇಕು ಎಂದರು.

ಬೆಳೆ ಹಾನಿ, ಆಸ್ತಿ ಹಾನಿಯಾದರೆ ಸಮೀಕ್ಷೆ ನಡೆಸಿ ನಿಖರವಾದ ವರದಿ ಪಡೆಯಬೇಕು. ಗಾಳಿ ಮಳೆಗೆ ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕಗಳು ಹಾನಿಯಾಗುತ್ತವೆ. ಇದಕ್ಕೆ ತಕ್ಷಣ ಸರಿಪಡಿಸುವಂತೆ ಚೆಸ್ಕಾಂ ಸಿಬ್ಬಂದಿಗಳಿಗೆ ಸ್ಪಂದಿಸಬೇಕು ಎಂದು ಸೂಚನೆ ನೀಡಿದರು. ಪ್ರವಾಹ ಮತ್ತು ಕೋವಿಡ್ ಕೆಲಸದ ಜೊತೆಗೆ ತಾಲ್ಲೂಕು ಕಚೇರಿಯ ನಿಗದಿತ ಕೆಲಸಗಳು ನಡೆಯಬೇಕು. ಸಾರ್ವಜನಿಕರಿಗೆ ತೊಂದರೆಯಾಗ ಬಾರದು. ಈ ಸಂದರ್ಭದಲ್ಲಿ ಯಾರೂ ಕೂಡ ಅನಿವಾರ್ಯ ಪರಿಸ್ಥಿತಿ ಹೊರತುಪಡಿಸಿ ರಜೆ ತೆಗೆದುಕೊಳ್ಳಬಾರದು ಎಂದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮುನ್ನೆಚ್ಚರಿಕೆ ಯಾಗಿ ಎಲ್ಲಾ ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ. ಅದರಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.

ವಿಕೋಪ ನಷ್ಟಕ್ಕೆ ಕಳೆದ ವರ್ಷ ನೀಡಿದಂತೆ ಪರಿಹಾರ ಮೊತ್ತ ನೀಡಲು ಸೂಚನೆ ಬಂದಿದೆ. ಈವರೆಗೆ ಪ್ರಾಣಿ ಹಾನಿಯಾಗಿಲ್ಲ. ಒಂದು ಮಾನವ ಹಾನಿಯಾಗಿದೆ. ಶುಂಠಿ ಮುಂತಾದ ಬೆಳೆಗೆ ಹೆಚ್ಚು ನೀರು ನಿಂತರೆ ಬೆಳೆ ನಷ್ಟ ಸಂಭವಿಸುತ್ತದೆ. ಕಬಿನಿ, ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿ ಗಳು ಹರಿಯುತ್ತಿದ್ದು ಪ್ರವಾಹ ಎಚ್ಚರಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಹೇಳಿದರು.

ಆ. 1 ರಿಂದ ಈ ವರೆಗೆ ಜಿಲ್ಲೆಯಲ್ಲಿ 66 ಮನೆಗಳಿಗೆ ಹಾನಿಯಾಗಿದೆ. ಪ್ರಾಣಿ ಹಾನಿ ಆಗಿಲ್ಲ. ಒಬ್ಬರು ಮೃತಪಟ್ಟಿದ್ದಾರೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಒ. ಪ್ರಶಾಂತ್ ಕುಮಾರ್ ಮಿಶ್ರಾ, ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಶ್ಯಂತ್, ಅಪರ ಜಿಲ್ಲಾಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News