ಅತೀವೃಷ್ಠಿಗೆ ಕೇಂದ್ರ ಸರ್ಕಾರ ಹೆಚ್ಚಿನ ಪರಿಹಾರ ಘೋಷಿಸಿ, ಬಿಡುಗಡೆ ಮಾಡಲಿ: ಬಡಗಲಪುರ ನಾಗೇಂದ್ರ ಆಗ್ರಹ

Update: 2020-08-07 17:29 GMT

ಮೈಸೂರು, ಆ.7: ಕಳೆದ ವರ್ಷ ಅತೀವೃಷ್ಠಿಗೆ ಪರಿಹಾರವನ್ನು ನೀಡದೆ ಕೇಂದ್ರ ಸರ್ಕಾರ ನುಣುಚಿಕೊಂಡಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಕೂಡಲೇ ಕೇಂದ್ರ ಸರ್ಕಾರ ಹೆಚ್ಚಿನ ನೆರವನ್ನು ಘೋಷಿಸಿ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದ್ದು, ಕಳೆದ ವರ್ಷ ತಲೆದೂರಿದ ಅತಿವೃಷ್ಠಿ ಮತ್ತು ಬರದಿಂದ ರಾಜ್ಯದ ಜನತೆ ತತ್ತರಿಸಿ ಹೋಗಿದ್ದು ಆ ನೋವಿನಿಂದ ಇನ್ನೂ ಹೊರಬರಲಾಗಿಲ್ಲ ಮತ್ತೊಮ್ಮೆ ಅತೀವೃಷ್ಠಿ ಪುನರಾರ್ವತನೆಯಾಗಿದ್ದು ರೈತರು ಮತ್ತು ಇತರೆ ಜನರು ದೊಡ್ಡ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೊಡಗಿನಲ್ಲಿ  ಅತೀ ಮಳೆಯಿಂದಾಗಿ ಸತತವಾಗಿ ಮೂರನೇ ಸಲ ಭೂ-ಕುಸಿತ ಉಂಟಾಗಿ ಸಾವು ನೋವುಗಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ ವರ್ಷವೇ ಮುಂದಿನ ವರ್ಷವೂ ಕೂಡ ಅತೀವೃಷ್ಠಿ ಆಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದರೂ ಹಾಗೆಯೇ ಕೊಡಗಿನಲ್ಲಾಗಿರುವ ಭೂ-ಕುಸಿತಕ್ಕೆ ಕಾರಣಗಳೇನು ಎಂಬುದನ್ನು ತಿಳಿಯಲು ತಜ್ಞರ ಸಮಿತಿ ಆಗಬೇಕೆಂದು ಚರ್ಚೆಗಳು ಆಗಿದ್ದವು. ಆದರೆ ಸರ್ಕಾರ ಇವುಗಳ ಬಗ್ಗೆ ಎಚ್ಚೆತ್ತುಕೊಳ್ಳಲೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎನ್‍ಡಿಆರ್‍ಎಫ್ ಅವೈಜ್ಞಾನಿಕ ನೀತಿ ಪರಿಹಾರಕ್ಕೆ ಅಡ್ಡಿ: ಎನ್‍ಡಿಆರ್‍ಎಫ್ ಅವೈಜ್ಞಾನಿಕ ನೀತಿ ಪರಿಹಾರಕ್ಕೆ ಅಡ್ಡಿಯಾಗಿದೆ ಎಂದು ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

1986ರಲ್ಲಿ ಎನ್‍ಡಿಆರ್‍ಎಫ್ ನೀತಿ ಜಾರಿಗೆ ಬಂದಿದೆ. ಆಗಿನ ಮಾನದಂಡವನ್ನು ಈಗಲೂ ಅನುಸರಿಸಲಾಗುತ್ತಿದೆ. ಹಾಗಾಗಿ ಹೆಚ್ಚಿನ ಪರಿಹಾರಕ್ಕೆ ಅಡ್ಡಿಯಾಗಿದೆ. ಉದಾಹರಣೆಗೆ ಒಂದು ಎಕದರೆ ಖುಷ್ಕಿ ಜಮೀನಿಗೆ 4800 ರೂ ನೀಡಲಾಗುತ್ತದೆ. ನೀರಾವರಿ ಜಮೀನಿಗೆ 11 ಸಾವಿರ ರೂ. ನೀಡಲಾಗುತ್ತದೆ. ಇದು ಅವೈಜ್ಞಾನಿಕ ಒಂದು ಎಕರೆಗೆ ಉಳುಮೆ ಮಾಡಲು 4800 ರೂ ಸಾಲುವುದಿಲ್ಲ ಈ ಪರಿಹಾರ ಪಡೆದು ರೈತರು ಬದುಕಲು ಸಾಧ್ಯವೆ ಎಂದು ಪ್ರಶ್ನಿಸಿದರು.

ಬಿಜೆಪಿ ಸಂಸದರಿಗೆ ಶಕ್ತಿ ಇಲ್ಲದಿದ್ದರೆ ನಮ್ಮನ್ನು ಕರೆದುಕೊಂಡು ಹೋಗಿ: ಕಳೆದ ವರ್ಷ ಸೃಷ್ಟಿಯಾದ ಅತೀವೃಷ್ಠಿ ಪರಿಹಾರವನ್ನು ನೀಡಲು ಕೇಂದ್ರ ಸರ್ಕಾರ ವಿಫಲವಾಗಿದ್ದು, ರಾಜ್ಯ ಬಿಜೆಪಿ ಸಂಸದರು ಪ್ರಧಾನಿ ಬಳಿ ಮಾತನಾಡಿ ಪರಿಹಾರ ತರುವಲ್ಲೂ ವಿಫರಾಗಿದ್ದಾರೆ. ನಿಮಗೆ ಶಕ್ತಿ ಇಲ್ಲದಿದ್ದರೆ ಪ್ರಧಾನಿ ಬಳಿಗೆ ನಮ್ಮನ್ನು ಕರೆದುಕೊಂಡು ಹೋಗಿ ಎಂದು ಹೇಳಿದರು.

ಪ್ರಧಾನಿ ಅವರ ಬಳಿ ಪರಿಹಾರ ಕೇಳಲು ಬಿಜೆಪಿ ಸಂಸದರಿಗೆ ಧೈರ್ಯ ಇಲ್ಲದಿದ್ದರೆ ನಮ್ಮನ್ನು ಕರೆದುಕೊಂಡು ಹೋಗಲಿ ನಾವು ಅವರನ್ನು ರಾಜ್ಯಕ್ಕೆ ಬರಬೇಕಾಗಿರುವ ಪರಿಹಾರ ಹಣವನ್ನು ಕೇಳುತ್ತೇವೆ. ಕಳೆದ ವರ್ಷದ ಹಣ ಬಿಡುಗಡೆ ಮಾಡಲು ಮೀನಾ ಮೀಷಾ ಎಣಿಸುತ್ತಿರುವುದು ಏಕೆ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News