ಅಂಗನವಾಡಿ, ಆಶಾ ಸಂಘಗಳ ಜಂಟಿ ಸಮಿತಿ ಸದಸ್ಯರಿಂದ ಪ್ರತಿಭಟನೆ

Update: 2020-08-07 17:49 GMT

ಬೆಂಗಳೂರು, ಆ.7: ಶಿಕ್ಷಣ ಸೇವೆಗಳ ಖಾಸಗೀಕರಣ ಪ್ರಸ್ತಾಪ ಹಿಂಪಡೆಯುವುದು, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮತ್ತು ಮಧ್ಯಾಹ್ನದೂಟ ಯೋಜನೆಗೆ ಬಜೆಟ್‍ನಲ್ಲಿ ಅನುದಾನ ಹಂಚಿಕೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೌರ್ಯ ವೃತ್ತದ ಗಾಂಧಿಪ್ರತಿಮೆ ಎದುರು ಶುಕ್ರವಾರ ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಸಂಘಗಳ ಜಂಟಿ ಸಮಿತಿಗಳ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ವೇಳೆ ಮಾತನಾಡಿದ ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಸಂಘಗಳ ಜಂಟಿ ಸಮಿತಿಗಳ ಅಧ್ಯಕ್ಷೆ ಎಸ್.ವರಲಕ್ಷ್ಮಿ, ಕೊರೋನ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದ ಐವರು ಅಂಗನವಾಡಿ ಕಾರ್ಯಕರ್ತೆಯರು ಸಾವನ್ನಪ್ಪಿದ್ದಾರೆ. ಇನ್ನು ಹಲವು ಅಂಗನವಾಡಿ ಕಾರ್ಯಕರ್ತೆಯರು ಕೆಲಸದ ಒತ್ತಡದಿಂದ ಅನೇಕ ಕಾಯಿಲೆಗಳಿಗೆ 23 ಮಂದಿ ತುತ್ತಾಗಿ ಸಾವನ್ನಪ್ಪಿದ್ದಾರೆ. ಅವರಿಗೂ ಕೂಡ ಸರಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಕೊರೋನ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತ ಭದ್ರತೆಯಿಲ್ಲ. ಜತೆಗೆ ಸೀಲ್ ಡೌನ್ ಆಗಿರುವ ಪ್ರದೇಶಕ್ಕೆ ತೆರಳಿ ಕೊರೋನ ಸಂಪರ್ಕದಲ್ಲಿರುವವರಿಗೆ ಆಹಾರದ ಕಿಟ್ ನೀಡಬೇಕು ಎಂದು ಸರಕಾರ ಸೂಚಿಸಿದೆ. ಹೀಗಾಗಿ ಸರಕಾರ ಸೂಕ್ತ ಭದ್ರತಾ ಕಿಟ್ ನೀಡಬೇಕು. ಜತೆಗೆ ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿದರು.

ಕೋವಿಡ್-19 ಕಾರ್ಯದಲ್ಲಿ ತೊಡಗಿರುವ ಕೆಲಸಗಾರರಿಗೆ ಅಪಾಯಕಾರಿ ಭತ್ಯೆಯಾಗಿ ಪ್ರತಿ ತಿಂಗಳು ಹತ್ತು ಸಾವಿರ ವೇತನ ನೀಡಬೇಕು.ಅಲ್ಲದೆ ಬಾಕಿ ಇರುವ ವೇತನ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.

ಎಐಯುಟಿಯುಸಿಯ ಸಂಚಾಲಕ ಹನುಮೇಶ್ ಮಾತನಾಡಿ, ಅಕ್ಷರ ದಾಸೋಹ ಬಿಸಿಯೂಟ ನೌಕರರಿಗೆ ಏಪ್ರಿಲ್‍ನಿಂದ ಸರಕಾರ ವೇತನ ನೀಡಿಲ್ಲ. ಕ್ವಾರಂಟೈನ್‍ನಲ್ಲಿ ಕೆಲಸ ಮಾಡುತ್ತಿರುವ ಬಿಸಿಯೂಟದ ನೌಕರರಿಗೆ ವೇತನ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News