ಕೊಡಗಿನಲ್ಲಿ ಮಹಾಮಳೆ: ಗ್ರಾಮಗಳು ಜಲಾವೃತ; ಆ.10ರವರೆಗೆ 'ಆರೆಂಜ್ ಅಲರ್ಟ್'

Update: 2020-08-08 15:00 GMT

ಮಡಿಕೇರಿ ಆ.8: ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಬಹುತೇಕ ಗ್ರಾಮೀಣ ಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಮಠ, ಮಂದಿರ, ಮಸೀದಿಗಳು ಕೂಡ ಪ್ರವಾಹದ ನೀರಿನ ಹೊಡೆತವನ್ನು ಎದುರಿಸುತ್ತಿವೆ.

ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಗಾಳಿ ಸಹಿತ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಪಕ್ಕದ ಭಗಂಡೇಶ್ವರ ಕ್ಷೇತ್ರ ಭಾಗಮಂಡಲ ಜಲಾವೃತಗೊಂಡಿದೆ. ತಲಕಾವೇರಿಯಲ್ಲಿ ಇದೇ ಮೊದಲ ಬಾರಿಗೆ ಪೂಜೆ ಸ್ಥಗಿತಗೊಂಡಿದೆ. ಶ್ರೀಭಗಂಡೇಶ್ವರ ದೇವಾಲಯವನ್ನು ನೀರು ಆವರಿಸಿದೆ. ನದಿ ಪಾತ್ರದ ಬಲಮುರಿಯಲ್ಲಿ ಹಳೆಯ ಸೇತುವೆ ಮುಳುಗಡೆಯಾಗಿರುವುದಲ್ಲದೆ, ಅಲ್ಲಿನ ಕಣ್ಣ ಮುನೇಶ್ವರ ಮತ್ತು ಅಗಸ್ತ್ಯೇಶ್ವರ ದೇಗುಲಗಳು ಮುಳುಗಡೆಯಾಗಿದ್ದು, ಸಾವಿರಾರು ಎಕರೆ ಗದ್ದೆ ಹಾಗೂ ತೋಟ ಮುಳುಗಡೆಯಾಗಿದೆ.

ವಿರಾಜಪೇಟೆ ಅರಮೇರಿ ಕಳಂಚೇರಿ ಮಠ ಮತ್ತು ಮಠದ ವಸತಿ ಶಾಲೆಗಳು ಜಲಾವೃತಗೊಂಡಿವೆ. ನಾಪೋಕ್ಲು, ಕೊಂಡಂಗೇರಿ, ದಕ್ಷಿಣ ಕೊಡಗು ಭಾಗದ ಮಸೀದಿಗಳು ಕೂಡ ಪ್ರವಾಹದ ಆತಂಕದಲ್ಲಿ ಮುಳುಗಿದೆ.

ಆರೆಂಜ್ ಅಲರ್ಟ್
ಆ.10 ರ ವರೆಗೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿದೆ. ನಿರೀಕ್ಷೆಯಂತೆ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 1,539 ಮಿ.ಮೀ. ಮಳೆಯಾಗಿದೆ. 

ಅಯ್ಯಪ್ಪ ಬೆಟ್ಟಕ್ಕೆ ಭೇಟಿ
ವಿರಾಜಪೇಟೆ ಭೂ ಕುಸಿತ ಪ್ರದೇಶ ಅಯ್ಯಪ್ಪ ಬೆಟ್ಟಕ್ಕೆ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿನ  ನಿವಾಸಿಗಳ ಅಹವಾಲು ಆಲಿಸಿ ಮಾತನಾಡಿದ ಸಚಿವರು, ಇಲ್ಲಿ ವಾಸವಾಗಿರುವ ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಕಾರ್ಯ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

ವಿರಾಜಪೇಟೆ ಪಟ್ಟಣ ಪಂಚಾಯತ್ ವತಿಯಿಂದ ಐಮಂಗಲದಲ್ಲಿ 4 ಎಕರೆ ಖಾಸಗಿ ಜಾಗವನ್ನು ಗುರುತಿಸಲಾಗಿದ್ದು, ಸುಮಾರು 400 ಮನೆಗಳನ್ನು ನಿರ್ಮಿಸಬಹುದು ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶ್ರೀಧರ್ ಅವರು ಮಾಹಿತಿ ನೀಡಿದರು.

ಪ್ರವಾಹ ಪೀಡಿತ ಪ್ರದೇಶಗಳು
ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜಿಲ್ಲಾಡಳಿತದಿಂದ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಕೆಲವು ಸ್ಥಳಗಳಲ್ಲಿ ಬರೆಗಳು ಜರಿದು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.  

ಮಡಿಕೇರಿ ತಾಲೂಕು ಭಾಗಮಂಡಲ, ಅಯ್ಯಂಗೇರಿ, ತಾವೂರು, ತಣ್ಣಿಮಾನಿ, ಸಣ್ಣ ಪುಲಿಕೋಟು, ಬೇತು, ಎಮ್ಮೆಮಾಡು, ಕೊಳಕೇರಿ, ನಾಪೋಕ್ಲು, ಬೆಟ್ಟಗೇರಿ, ದೊಡ್ಡ ಪುಲಿಕೋಟು, ಐಕೊಳ, ಹೊದ್ದೂರು, ಹೊದವಾಡ, ಕುಂಬಳದಾಳು, ಕಿಗ್ಗಾಲು, ಎಸ್.ಕಟ್ಟೆಮಾಡು, ಪರಂಬು ಪೈಸಾರಿ ಸೇರಿದಂತೆ 18 ಪ್ರದೇಶಗಳು, ವಿರಾಜಪೇಟೆ ತಾಲೂಕುವಿನ ಕರಡಿಗೋಡು, ಗುಹ್ಯ, ಕೊಂಡಂಗೇರಿ, ಹಚ್ಚಿನಾಡು, ನಾಲ್ಕೇರಿ, ಹೈಸೊಡ್ಲೂರು, ಬಲ್ಯಮಂಡೂರು, ಬಿರುನಾಣಿ, ತೆರಾಲು, ಅರುವತ್ತೊಕ್ಲು, ನಿಡುಗುಂಬ, ಹಾತೂರು, ಮೈತಾಡಿ, ಬಾಳೆಲೆ ಸೇರಿ 14, ಸೋಮವಾರಪೇಟೆ ತಾಲೂಕು ಮುಳ್ಳುಸೋಗೆ ಗ್ರಾಮದ ಕುವೆಂಪು ಬಡಾವಣೆ, ತಮ್ಮಣ್ಣ ಶೆಟ್ಟಿ ಬಡಾವಣೆ, ಬಸವನಹಳ್ಳಿ, ಮಾದಾಪಟ್ಟಣ, ಬೈಚನಹಳ್ಳಿ, ಕೂಡ್ಲೂರು (ನಿಸರ್ಗ ಬಡಾವಣೆ) ಬೆಟ್ಟದಕಾಡು, ಬರಡಿ, ಕುಂಬಾರಗುಂಡಿ ಕುಶಾಲನಗರ ಪಟ್ಟಣ ಪಂಚಾಯತ್ ಕುಶಾಲನಗರ ಸಾಯಿ ಬಡಾವಣೆ, ಬಸಪ್ಪ ಬಡಾವಣೆ, ತ್ಯಾಗರಾಜ ರಸ್ತೆ, ವಿವೇಕಾನಂದ ಬಡಾವಣೆ, ರಸೂಲ್ ಬಡಾವಣೆ, ಶೈಲಜಾ ಬಡಾವಣೆ, ಇಂದಿರಾ ಬಡಾವಣೆ, ದಂಡಿನಪೇಟೆ, ಅಯ್ಯಪ್ಪ ಸ್ವಾಮಿ ದೇವಾಲಯ ರಸ್ತೆ, ಬಿದ್ದಪ್ಪ ಬಡಾವಣೆ, ನಿಜಾಮುದ್ದೀನ್ ಬಡಾವಣೆ, ತಾವರೆಕೆರೆ ರಸ್ತೆ ಸೇರಿ 12 ಸ್ಥಳಗಳನ್ನು ಒಳಗೊಂಡು ಒಟ್ಟು 52 ಪ್ರದೇಶಗಳು ಪ್ರವಾಹ ಪೀಡಿತ ಆಗಿದೆ.

ಬರೆ ಕುಸಿತದ ಪ್ರದೇಶಗಳು
ಮಡಿಕೇರಿ ತಾಲೂಕು ಬೊಟ್ಲಪ್ಪ ಪೈಸಾರಿ (ಕಡಗದಾಳು), ಜೋಡುಪಾಲ, ನೀರುಕೊಲ್ಲಿ, ಕೊಟ್ಟಮುಡಿ, ಹೊದವಾಡ, ಅಬ್ಯಾಲ ನಗರಸಭೆ ಮಡಿಕೇರಿಯಲ್ಲಿ ದೇಚೂರು, ಸೋಮವಾರಪೇಟೆ ತಾಲೂಕು ಅತ್ತೂರುನಲ್ಲೂರು (ಕೊಟ್ಟಗೇರಿ ಪೈಸಾರಿ), ತಾಕೇರಿ, ಸೂರ್ಲಬ್ಬಿ, ಮಾದಾಪುರ, ಶಾಂತಳ್ಳಿ ಹಾಗೂ ವಿರಾಜಪೇಟೆ ತಾಲೂಕು ಮಗ್ಗುಲದಲ್ಲಿ ಭೂಕುಸಿತ ಉಂಟಾಗಿದೆ.

561 ಮಂದಿಯ ರಕ್ಷಣೆ
ನಾಪೋಕ್ಲು 13 ಮಂದಿ, ಹೊದವಾಡದಲ್ಲಿ 13, ನೆಲ್ಲಿಹುದಿಕೇರಿಯ 96 ಕಡಗದಾಳು 150, ಕೊಟ್ಟಮುಡಿ 29, ಚೆರಿಯಪರಂಬು 7, ಬಾಳೆಗುಂಡಿ ಗ್ರಾಮ (ವಾಲ್ನೂರು ತ್ಯಾಗತ್ತೂರು)6, ನಲ್ವತ್ತೆಕರೆ 12, ಬೆಟ್ಟಗೇರಿ 8, ಬೊಟ್ಲಪ್ಪ ಪೈಸಾರಿ, ಕಡಗದಾಳು 51, ಕೈಮಾಡು 5, ನೀರುಕೊಲ್ಲಿ 43, ಮೈತಾಡಿ 40, ಕೊಂಡಂಗೇರಿ 8, ಸಿದ್ದಾಪುರ (ಕುರುಬರ ಗುಂಡಿ) 8, ತಣ್ಣಿಮಾನಿ 50, ಬೆಟ್ಟದಕಾಡು 10, ಅತ್ತೂರು ನಲ್ಲೂರು ಕೊಟ್ಟಗೇರಿ ಪೈಸಾರಿ 10, ಬಾಳೆಲೆ 2 ಸೇರಿದಂತೆ ಒಟ್ಟು 561 ಮಂದಿಯನ್ನು ರಕ್ಷಿಸಲಾಗಿದೆ.

ಪರಿಹಾರ ಕೇಂದ್ರಗಳು
ಮಡಿಕೇರಿ ತಾಲೂಕು ಭಾಗಮಂಡಲ ಹೋಬಳಿ, ಕಾಶಿಮಠ 52 ಕುಟುಂಬದ 109 ಮಂದಿ ಆಶ್ರಯ ಪಡೆದಿದ್ದಾರೆ. ಕೆ.ವಿ.ಜಿ.ಕಾಲೇಜು, ಭಾಗಮಂಡಲದ 57 ಕುಟುಂಬಗಳ 165 ಮಂದಿ, ಸರ್ಕಾರಿ ಸಂಯುಕ್ತ ಪ್ರೌಢ ಶಾಲೆ, ಕಡಗದಾಳುವಿನಲ್ಲಿ 22 ಕುಟುಂಬದ 40 ಮಂದಿ ಸೇರಿದಂತೆ ಮಡಿಕೇರಿ ತಾಲೂಕಿನ ಒಟ್ಟು 3 ಕೇಂದ್ರಗಳಲ್ಲಿ 131 ಕುಟುಂಬದ 314 ಮಂದಿ ಆಶ್ರಯ ಪಡೆದಿದ್ದಾರೆ.

ವಿರಾಜಪೇಟೆ ತಾಲೂಕಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಕರಡಿಗೋಡುವಿನಲ್ಲಿ 23 ಕುಟುಂಬದ 53 ಮಂದಿ, ಸರ್ಕಾರಿ ಪ್ರೌಢಶಾಲೆ, ಕೊಂಡಂಗೇರಿಯ 8 ಕುಟುಂಬದ 27 ಮಂದಿ, ಬಸವೇಶ್ವರ ಸಮುದಾಯ ಭವನ, ಕರಡಿಗೋಡುವಿನಲ್ಲಿ 5 ಕುಟುಂಬದ 27 ಮಂದಿ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಹುದಿಕೇರಿಯ 31 ಕುಟುಂಬದ 112 ಮಂದಿ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಬಲ್ಯಮಂಡೂರು ವಿನಲ್ಲಿ 5 ಕುಟುಂಬದ 16 ಮಂದಿ,ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಚಿಕ್ಕಪೇಟೆ, ವಿರಾಜಪೇಟೆಯ 11 ಕುಟುಂಬದ 17 ಮಂದಿ ಸೇರಿದಂತೆ ವಿರಾಜಪೇಟೆ ತಾಲೂಕಿನ ಒಟ್ಟು 6 ಕೇಂದ್ರಗಳು 83 ಕುಟುಂಬದ 252 ಮಂದಿ ಆಶ್ರಯ ಪಡೆದಿದ್ದಾರೆ. ಜಿಲ್ಲೆಯ ಒಟ್ಟು 9 ಪರಿಹಾರ ಕೇಂದ್ರಗಳಲ್ಲಿ 214 ಕುಟುಂಬದ 566 ಮಂದಿ ಆಶ್ರಯ ಪಡೆದಿದ್ದಾರೆ.        

ಭೂ ಕುಸಿತ ಮತ್ತು ಪ್ರವಾಹದಿಂದ ಬಂದ್ ಆದ ರಸ್ತೆಗಳ ವಿವರ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಬರೆ ಜರಿದಿರುವುದರಿಂದ ಮತ್ತು ಮರ ಬಿದ್ದಿರುವುದರಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು ತುರ್ತಾಗಿ ಕ್ರಮ ವಹಿಸಬಹುದಾದ ಕಡೆಗಳಲ್ಲಿ ಸಂಬಂಧಪಟ್ಟ ಇಲಾಖೆಗಳಿಂದ ತುರ್ತು ಕ್ರಮ ವಹಿಸಿ ರಸ್ತೆಗಳನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಜಿಲ್ಲೆಯ ಕೆಲವು ರಸ್ತೆಗಳು ಭೂ ಕುಸಿತ ಮತ್ತು ಪ್ರವಾಹದಿಂದ ಬಂದ್ ಆಗಿರುತ್ತವೆ. 

ವಾಹನ ಸಂಚಾರ ಸ್ಥಗಿತಗೊಂಡಿರುವ ರಸ್ತೆಗಳು: ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಶಾಲನಗರದಿಂದ-ಗುಡ್ಡೆ ಹೊಸೂರಿನ ವರೆಗಿನ ಸಂಚಾರ. ಕತ್ತಲೆಕಾಡು-ಮರಗೋಡು ರಸ್ತೆ ಮಡಿಕೇರಿ-ವಿರಾಜಪೇಟೆ ರಾಜ್ಯ ಹೆದ್ದಾರಿಯಲ್ಲಿ ಬೇತ್ರಿ ಸೇತುವೆಯ ಮೇಲಿನ ಸಂಚಾರ. ಮುತ್ತಾರುಮುಡಿ, ಕಗ್ಗೊಡ್ಲು, ಭಾಗಮಂಡಲ-ಅಯ್ಯಂಗೇರಿ ರಸ್ತೆ, ಭಾಗಮಂಡಲ-ತಲಕಾವೇರಿ ರಸ್ತೆ, ಚೆಟ್ಟಿಮಾನಿ ಕಿರಿಯ ಸೇತುವೆ ರಸ್ತೆ

ಅತಿವೃಷ್ಟಿಯಿಂದ ಆಗಬಹುದಾದ ತೊಂದರೆಗಳನ್ನು ಎದುರಿಸಲು ಜಿಲ್ಲಾಡಳಿತವು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯಾದ್ಯಂತ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿರುತ್ತಾರೆ. ಯಾವುದೇ ತುರ್ತು ಸಂದರ್ಭಗಳನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಜನರು ಯಾವುದೇ ಆತಂಕ ಪಡುವ ಅಗತ್ಯವಿರುವುದಿಲ್ಲ. ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ತಾಲೂಕಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ಮೊಕ್ಕಾಂ ಹೂಡಿದ್ದು, ತುರ್ತು ಸಂದರ್ಭದಲ್ಲಿ ನೆರವಿಗೆ ಬರಲಿವೆ. ಅಲ್ಲದೆ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಲ್ಲಿ 24x7 ನಿಯಂತ್ರಣಾ ಕೊಠಡಿಗಳು ಕಾರ್ಯನಿರ್ವಹಿಸುತ್ತಿವೆ. ಹಾಗೆಯೇ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಾಟ್ಸ್ ಆ್ಯಪ್‍ನಲ್ಲಿ ಸಹ ಪ್ರಕೃತಿ ವಿಕೋಪ ಸಂಬಂಧಿತ ದೂರುಗಳನ್ನು ಸ್ವೀಕರಿಸಲಾಗುತ್ತಿದ್ದು, ತುರ್ತು ಕ್ರಮ ವಹಿಸಲಾಗುತ್ತಿದೆ. 

ಹಾರಂಗಿ ಜಲಾಶಯದಿಂದ ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಕೃತಿ ವಿಕೋಪ ಸಂಬಂಧಿತ ಹಾನಿಯ ಬಗ್ಗೆ ವಿವರ ಮತ್ತು ನೆರವು ಕೋರಲು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಂಟ್ರೋಲ್ ಕೊಠಡಿ ಸಂ:08272-221077 ಮತ್ತು ವಾಟ್ಸಪ್ ನಂ.8550001077 ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News