ಮೈಸೂರು: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರಿಂದ ಅರೆಬೆತ್ತಲೆ ಪ್ರತಿಭಟನೆ

Update: 2020-08-08 19:00 GMT

ಮೈಸೂರು,ಆ.8: ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ಬಿಟ್ಟು ತೊಲಗಿ ಹೋರಾಟ ಆರಂಭವಾದ ಆಗಸ್ಟ್ 8 ರ ನೆನಪಿನ ದಿನದಂದು, ಕಾರ್ಪೋರೇಟ್ ಕಂಪನಿಗಳು ಕೃಷಿ ಬಿಟ್ಟು ತೊಲಗಲಿ ಹೋರಾಟದ ಮೂಲಕ ರೈತರು ಅರೆಬೆತ್ತಲೆ ಚಳುವಳಿ ನಡೆಸಿ ಸರ್ಕಾರವನ್ನು ಎಚ್ಚರಿಸಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ನಗರದ ನ್ಯಾಯಾಲಯದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆ ಬಳಿ ಶನಿವಾರ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, “ತೊಲಗಲಿ ತೊಲಗಲಿ ಬಹುರಾಷ್ಟ್ರೀಯ ಕಂಪನಿಗಳು ಕೃಷಿಯಿಂದ ತೊಲಗಲಿ” “ಕೃಷಿ ಭೂಮಿ ನಮ್ಮದು ಮಾರಾಟಕ್ಕಿಲ್ಲ, ಪ್ರಾಣ ಕೊಟ್ಟೇವು, ಕೃಷಿ ಭೂಮಿ ಕೊಡೆವು, ರೈತ ದ್ರೋಹಿ ಸರ್ಕಾರಕ್ಕೆ ಧಿಕ್ಕಾರ” ಎಂಬ ಘೋಷಣೆಯನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕೇಂದ್ರ ರಾಜ್ಯ ಸರ್ಕಾರಗಳು ಹಲವಾರು ಜನವಿರೋಧಿ ಶಾಸನಗಳನ್ನು ಚರ್ಚೆಯಿಲ್ಲದೆ, ಶಾಸನ ಸಭೆ ನಡೆಸದೆ ಸುಘ್ರೀವಾಜ್ಞೆ ತಂದು ಜಾರಿ ಮಾಡಿದೆ. ಇದು ಪಾಳೆಗಾರಿಕೆಯ ಪ್ರಜಾಪ್ರಭುತ್ವವಾಗಿದೆ. ಜನತಂತ್ರ ವ್ಯವಸ್ಥೆಯನ್ನು ನಾಶಮಾಡುವ ಪ್ರಕ್ರಿಯೆಯಾಗಿದೆ. ಅಧಿಕಾರಕ್ಕೆ ಬರುವ ಮೊದಲು ಬಿಜೆಪಿ ಯವರು ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ವಿಶೇಷವಾಗಿ ವರ್ಣಿಸಿ ಮಾತನಾಡುತ್ತಿದ್ದರು. ಅಧಿಕಾರಕ್ಕೆ ಬಂದ ನಂತರ ಎಲ್ಲವನ್ನು ಮರೆತು ವಿದೇಶಿ ಸಂಸ್ಕೃತಿಗೆ ಕೆಂಪು ಹಾಸಿನ ಸ್ವಾಗತವನ್ನು ನೀಡುವ ಮೂಲಕ ದ್ವಂದ್ವ ನಿಲುವನ್ನು ತೋರುತಿದ್ದಾರೆ ಎಂದು ಕಿಡಿಕಾರಿದರು.

ಎ.ಪಿ.ಎಂ.ಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ವಿದ್ಯುತ್ ಕಾಯ್ದೆ, ಗುತ್ತಿಗೆ ಕೃಷಿ ಕಾಯ್ದೆಗಳನ್ನು ಕೊರೋನ ಸಂಕಷ್ಟದ ಕಾಲದಲ್ಲಿ ತಿದ್ದುಪಡಿ ಮಾಡಿ ಜಾರಿಗೆ ತಂದಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು 1974 ರಲ್ಲೇ ಜಾರಿಗೆ ತಂದಿರುವುದು. ಆದರೆ ಬಿಜೆಪಿ ಸರ್ಕಾರ ಇದೀಗ ಭೂಗಳ್ಳರ, ಕಾರ್ಪೋರೇಟ್ ಕಂಪನಿಗಳ, ಗೃಹ ನಿರ್ಮಾಣ ಸಂಘಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ರಾಜ್ಯ ಸರ್ಕಾರ ಈ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯದಿದ್ದರೆ ವಿಧಾನಸೌದಕ್ಕೆ ರೈತರು ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯಾದ್ಯಂತ ಮಳೆ ಹಾನಿ ಅತಿವೃಷ್ಠಿಯಿಂದ ಹಾನಿಯಾಗಿರುವ ಜನರ ರಕ್ಷಣೆಗೆ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯ ತತ್ಪರವಾಗಬೇಕು, ಕೇಂದ್ರ, ರಾಜ್ಯ ಸರ್ಕಾರವು ವಿಶೇಷ ಹೆಚ್ಚಿನ ಆರ್ಥಿಕ ನೆರವನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ವಿ.ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಕಿರಂಗಸೂರು ಶಂಕರ್, ಸಾಮೂಹಿಕ ನಾಯಕತ್ವ ರೈತ ಸಂಘದ ರಘು, ಮಂಜು ಕಿರಣ್,  ರೈತ ಮುಖಂಡರುಗಳಾದ ಸಿದ್ದೇಶ್, ಕೃಷ್ಣೇಗೌಡ, ರಾಮೇಗೌಡ, ನಾಗರಾಜು, ಕೃಷ್ಣಪ್ಪ, ರಂಗರಾಜು, ಮಹದೇವಸ್ವಾಮಿ, ಕೆಂಡಗಣ್ಣ ಸ್ವಾಮಿ, ಮಂಜುನಾಥ್, ಅಪ್ಪಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News