ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವುದೇ ನನ್ನ ಗುರಿ: ಡಿ.ಕೆ. ಶಿವಕುಮಾರ್

Update: 2020-08-09 18:06 GMT

ಮಡಿಕೇರಿ, ಆ.9: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ವ್ಯವಸ್ಥಿತವಾಗಿ ಸಂಘಟಿಸುವ ಮೂಲಕ ಅಧಿಕಾರಕ್ಕೆ ತರುವುದೇ ನನ್ನ ಪ್ರಮುಖ ಗುರಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿತ ‘ಕ್ವಿಟ್ ಇಂಡಿಯಾ ಚಳುವಳಿ’ಯ 78ನೇ ವಾರ್ಷಿಕೋತ್ಸವ ಮತ್ತು ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಸಕ್ರಿಯವಾಗಿ ಪಕ್ಷದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕೆಂದು ಕರೆ ನೀಡಿದರು.

ದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿಕೊಡುವಲ್ಲಿ ನಿರ್ಣಾಯಕ ಮೈಲುಗಲ್ಲಾಗಿರುವ ಕ್ವಿಟ್ ಇಂಡಿಯಾ ಚಳುವಳಿಯ ದಿನಾಚರಣೆಯಲ್ಲಿ ಯೋಧರ ನಾಡಾದ ಕೊಡಗಿನಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದು ಬಣ್ಣಿಸಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಕೆ.ಮಂಜುನಾಥ್ ಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿ, ಕೆಪಿಸಿಸಿ ಆಯೋಜಿಸಿರುವ ಅಭಯ ಆರೋಗ್ಯ ಹಸ್ತ ಕಾರ್ಯಕ್ರಮದ ಮೂಲಕ ಜಿಲ್ಲೆಯ ಪ್ರತಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕರ್ತರು ತಲುಪಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಂಸದರಾದ ಧ್ರುವನಾರಾಯಣ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೆಪಿಸಿಸಿ ಹಿರಿಯ ಉಪಾಧ್ಯಕ್ಷರಾದ ಮಿಟ್ಟು ಚಂಗಪ್ಪ, ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ, ಕೆಪಿಸಿಸಿ ಉಸ್ತುವಾರಿ ಮಂಜುಳಾ ರಾಜ್, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಡಾ.ಪುಷ್ಪ ಅಮರನಾಥ್, ವಿರಾಜಪೇಟೆ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಟಿ.ಎಂ.ಶಾಹಿದ್ ತೆಕ್ಕಿಲ್, ಕೆಪಿಸಿಸಿ ಸಂಯೋಜಕ ಪ್ರದೀಪ್ ರೈ ಪಾಂಬಾರ್, ಮುಖಂಡರಾದ ಕೆ. ಪಿ. ಚಂದ್ರಕಲಾ, ಹೆಚ್. ಎಸ್. ಚಂದ್ರಮೌಳಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ಸೇವಾದಳದ ಪ್ರೇಮಾ ಕೃಷ್ಣಪ್ಪ ಪ್ರಾರ್ಥಿಸಿ, ರಾಜೀವ್ ಗಾಂಧಿ ಪಂಚಾಯತ್ ರಾಜ್  ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನೀರ ಮೈನಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News