ಎಸೆಸೆಲ್ಸಿ ಫಲಿತಾಂಶ: ಚಿಕ್ಕಮಗಳೂರಿನ ತನ್ಮಯಿಗೆ 625ರಲ್ಲಿ 625 ಅಂಕ

Update: 2020-08-10 14:45 GMT

ಚಿಕ್ಕಮಗಳೂರು, ಆ.10: ಕಾಫಿನಾಡಿನ ವಿದ್ಯಾರ್ಥಿನಿ ಐ.ಪಿ.ತನ್ಮಯಿ ಎಸೆಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿರುವುದಲ್ಲದೇ ಜಿಲ್ಲೆಗೂ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

ಪಿ.ತನ್ಮಯಿ ನಗರದ ಸೇಂಟ್ ಜೋಸೆಫ್ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಚಿಕ್ಕಮಗಳೂರು ನಗರದ ಇಂದಾವರ ಗ್ರಾಮದ ಐ.ಎಸ್.ಪ್ರಸನ್ನ ಹಾಗೂ ಡಿ.ಎಲ್.ಸಂಧ್ಯಾ ದಂಪತಿಯ ಪುತ್ರಿ. ಈಕೆಯ ತಂದೆ ಐ.ಎಸ್.ಪ್ರಸನ್ನ ಚಿಕ್ಕಮಗಳೂರು ತಾಲೂಕು ವಸ್ತಾರೆ ನಾಡಕಚೇರಿಯಲ್ಲಿ ಉಪ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಯಿ ಮಲ್ಲಂದೂರು ಸರಕಾರಿ ಶಾಲೆಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ರಾಜ್ಯಕ್ಕೆ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿರುವ ಐ.ಪಿ.ತನ್ಮಯಿ ಮಾತನಾಡಿ, ಪ್ರತೀ ದಿನ ಎರಡು ಗಂಟೆಗಳ ಕಾಲ ಓದುತ್ತಿದ್ದೆ. ಪರೀಕ್ಷಾ ದಿನಾಂಕ ನಿಗದಿಯಾದ ನಂತರ ಇನಷ್ಟು ಹೆಚ್ಚಿನ ಕಾಲ ಅಭ್ಯಸ ಮಾಡುತ್ತಿದ್ದೆ. ಪರೀಕ್ಷೆಗೆ ಮೊದಲು ನಡೆಸಿದ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ 625ಕ್ಕೆ 614 ಅಂಕ ಪಡೆದುಕೊಂಡಿದ್ದೆ. ಅಂತಿಮ ಪರೀಕ್ಷೆಯಲ್ಲಿ 652ಕ್ಕೆ 625 ಅಂಕ ಬಂದಿರುವುದು ಖುಷಿ ತಂದಿದೆ. ಕಷ್ಟಪಟ್ಟು ಓದಿದಕ್ಕೂ ಸಾರ್ಥಕವಾಯಿತು ಎಂದು ತಿಳಿಸಿದ್ದಾಳೆ

ನಾನು ಟ್ಯೂಷನ್ ಪಡೆದುಕೊಂಡಿಲ್ಲ, ಲಾಕ್‍ಡೌನ್ ಸಂದರ್ಭದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಆನ್‍ಲೈನ್ ಪಾಠ ನನಗೆ ಬಹಳ ಉಪಯೋಗಕ್ಕೆ ಬಂತು. ನಾನು ಮರೆತಿದ್ದ ವಿಷಯಗಳು ಮತ್ತೆ ಜ್ಞಾಪಕಕ್ಕೆ ಬರುತ್ತಿತ್ತು. ಶಾಲೆಯಲ್ಲಿ ಶಿಕ್ಷಕರು ವಿಶೇಷ ತರಗತಿಗಳನ್ನು ನಡೆಸುತ್ತಿದ್ದರು. ಇದೆಲ್ಲವೂ ನನ್ನ ಸಾಧನೆಗೆ ಕಾರಣವಾಯ್ತು. ಮುಂದೆ ವಿಜ್ಞಾನ ವಿಷಯವನ್ನು ಓದಬೇಕೆಂದುಕೊಂಡಿದ್ದೇನೆ ಎಂದರು. 

ತನ್ಮಯಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡು ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾಳೆ. ತನ್ಮಯಿ ಶಾಲೆಯಲ್ಲಿ ದೈನಂದಿನ ಪಠ್ಯ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಳು. ಸೌಮ್ಯ ಸ್ವಭಾವ ಹೊಂದಿದ್ದ ತನ್ಮಯಿ ಗೊತ್ತಿಲ್ಲದ ವಿಷಯಗಳನ್ನು ಶಿಕ್ಷಕರಲ್ಲಿ ಕೇಳಿ ತಿಳಿದುಕೊಳ್ಳುವ ಪ್ರವೃತ್ತಿ ಹೊಂದಿದ್ದಳು. ಕೊರೋನ ಸಂದರ್ಭದಲ್ಲಿ ಕನ್ನಡ ಮತ್ತು ಇಂಗ್ಲೀಷ್ ಮಾದ್ಯಮ ಎರಡು ವಾಟ್ಸಪ್ ಗ್ರೂಪ್ ಮಾಡಿ ವಿದ್ಯಾರ್ಥಿಗಳಿಗೆ ಪಠ್ಯ ವಿಷಯದ ಮಾಹಿತಿಯನ್ನು ಹಾಕುತ್ತಿದ್ದೆವು. ಅದೆಲ್ಲವನ್ನು ತನ್ಮಯಿ ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಿದ್ದಳು.
-ಸಿಸ್ಟರ್ ಸಿಸಿಲಿ ಜೋಸೆಫ್, ಸೆಂಟ್ ಜೋಸೇಫ್ ಶಾಲೆ, ಮುಖ್ಯಶಿಕ್ಷಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News