ಎಸೆಸೆಲ್ಸಿ ಫಲಿತಾಂಶ: ಶೇ.71.80 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ, ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಮೇಲುಗೈ

Update: 2020-08-10 13:42 GMT

ಬೆಂಗಳೂರು, ಆ.10: ಕೊರೋನ ಸಂಕಷ್ಟದ ಸಂದರ್ಭದಲ್ಲಿಯೂ ನಡೆದ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟಾರೆ 71.80 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಅದರಲ್ಲಿಯೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂಬುದು ವಿಶೇಷವಾಗಿದೆ.

2019-20 ನೇ ಸಾಲಿನಲ್ಲಿ 8,11,050 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರ ಪೈಕಿ 5,82,316 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು, ಒಟ್ಟಾರೆ ಫಲಿತಾಂಶ ಶೇ.71.80 ರಷ್ಟಿದೆ. ಇದರಲ್ಲಿ 2,82,461 ವಿದ್ಯಾರ್ಥಿಗಳು (ಶೇ.66.41) ಹಾಗೂ 2,99,855(ಶೇ.77.74) ವಿದ್ಯಾರ್ಥಿನಿಯರು ಉತ್ತೀರ್ಣರಾಗುವ ಮೂಲಕ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ನಗರ ಪ್ರದೇಶದಲ್ಲಿ 3,23,371 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದು, 2,37,402 ವಿದ್ಯಾರ್ಥಿಗಳು ಉತ್ತೀರ್ಣ(73.41)ಗೊಂಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 4,15,100 ವಿದ್ಯಾರ್ಥಿಗಳು ನೋಂದಾವಣೆ ಮಾಡಿಕೊಂಡಿದ್ದು, 3,20,377 ವಿದ್ಯಾರ್ಥಿಗಳು ತೇರ್ಗಡೆ(ಶೇ.77.18)ಯಾಗಿದ್ದಾರೆ.

ರಾಜ್ಯದ ಒಟ್ಟಾರೆ 5233 ಸರಕಾರಿ ಶಾಲೆಗಳಿಂದ 2,05,501 ವಿದ್ಯಾರ್ಥಿಗಳು(72.79), 3363 ಅನುದಾನಿತ ಶಾಲೆಗಳ 1,39,791 ವಿದ್ಯಾರ್ಥಿಗಳು(70.60) ಹಾಗೂ 6103 ಅನುದಾನ ರಹಿತ ಶಾಲೆಗಳ 2,12,487 ವಿದ್ಯಾರ್ಥಿಗಳು(75.53) ಉತ್ತೀರ್ಣರಾಗಿದ್ದಾರೆ.

ಮರುಪರೀಕ್ಷೆಗೆ ಅವಕಾಶ: ಕೊರೋನ ಕಾರಣದಿಂದ ಈ ಬಾರಿಯ ಮುಖ್ಯ ಪರೀಕ್ಷೆಯಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗದಂತಹ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯಲ್ಲಿ ಅವಕಾಶ ನೀಡಲಾಗುತ್ತದೆ. ಅಲ್ಲದೆ, ಎಲ್ಲರನ್ನೂ ಪ್ರಥಮ ವಿದ್ಯಾರ್ಥಿ ಎಂದೇ ಪರಿಗಣಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ ಕುಮಾರ್ ಹೇಳಿದ್ದಾರೆ.

ಗರಿಷ್ಠ ಅಂಕ ಗಳಿಸಿದವರ ವಿವರ

625ಕ್ಕೆ 625 ಅಂಕಗಳನ್ನು 6 ವಿದ್ಯಾರ್ಥಿಗಳು, 625ಕ್ಕೆ 624 ಅಂಕಗಳನ್ನು 11 ವಿದ್ಯಾರ್ಥಿಗಳು, 623 ಅಂಕಗಳನ್ನು 43 ವಿದ್ಯಾರ್ಥಿಗಳು, 622 ಅಂಕಗಳನ್ನು 56 ವಿದ್ಯಾರ್ಥಿಗಳು, 621 ಅಂಕಗಳನ್ನು 68 ವಿದ್ಯಾರ್ಥಿಗಳು ಹಾಗೂ 620 ಅಂಕಗಳನ್ನು 117 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

625 ಅಂಕಗಳಿಸಿದವರು

ಸನ್ನಿಧಿ ಮಹಾಬಲೇಶ್ವರ ಹೆಗಡೆ (ಸರಕಾರಿ ಮಾರಿಕಾಂಬಾ ಪಿಯು ಕಾಲೇಜು, ಶಿರಸಿ), ಚಿರಾಯು ಕೆ.ಎಸ್. (ಸೇಂಟ್ ಮೇರಿ ಹೈಸ್ಕೂಲ್, ಬೆಂಗಳೂರು), ನಿಖಿಲೇಶ್ ಎನ್.ಮುರಳಿ (ಪೂರ್ಣಪ್ರಜ್ಞ ಶಿಕ್ಷಣ ಕೇಂದ್ರ, ಬೆಂಗಳೂರು), ಧೀರಜ್ ರೆಡ್ಡಿ ಎಂ.ಪಿ. (ಸತ್ಯಸಾಯಿ ಸರಸ್ವತಿ ಇಂಗ್ಲಿಷ್ ಮಾಧ್ಯಮ ಶಾಲೆ, ಮಂಡ್ಯ), ಅನುಷ್ ಎ.ಎಲ್. (ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಸುಳ್ಯ), ತನ್ಮಯಿ ಐ.ಪಿ. (ಸೇಂಟ್ ಜೋಸೆಫ್ ಕಾನ್ವೆಂಟ್ ಸ್ಕೂಲ್, ಚಿಕ್ಕಮಗಳೂರು)

624 ಅಂಕ ಗಳಿಸಿದವರು

ಬೆಂಗಳೂರಿನ ಜಿ.ಕೆ. ಅಮೋಘ್, ಪ್ರಣವ್ ವಿಜಯ್ ನಾಡಿಗೇರ, ಎಂ.ಡಿ. ವೀಣಾ, ನಿಹಾರಿಕಾ ಸಂತೋಷ್ ಕುಲಕರ್ಣಿ, ಎ.ಎಸ್. ಸ್ಫೂರ್ತಿ, ಉತ್ತರ ಕನ್ನಡದ ಅನಿರುದ್ಧ್ ಸುರೇಶ್ ಗುತ್ತೀಕರ್, ತುಮಕೂರಿನ ಜಿ.ಎಂ. ಮಹೇಶ್, ಉಡುಪಿಯ ಸುರಭಿ ಎಸ್.ಶೆಟ್ಟಿ, ದಕ್ಷಿಣ ಕನ್ನಡದ ಸುಮುಖ ಸುಬ್ರಹ್ಮಣ್ಯ ಶೆಟ್ಟಿ, ನಿಧಿ ರಾವ್, ಶಿವಮೊಗ್ಗದ ಟಿ.ಎಸ್. ಅಭಿರಾಮ 625ಕ್ಕೆ 624 ಅಂಕಗಳನ್ನು ಪಡೆದಿದ್ದಾರೆ.

ಶೂನ್ಯ ಫಲಿತಾಂಶ ಪಡೆದ ಶಾಲೆಗಳು

ರಾಜ್ಯದಾದ್ಯಂತ 501 ಸರಕಾರಿ ಶಾಲೆಗಳು ಶೇ.100 ಫಲಿತಾಂಶ ಪಡೆದಿದ್ದರೆ, 4 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ. 139 ಅನುದಾನಿತ ಶಾಲೆಗಳು ಶೇ.100 ಫಲಿತಾಂಶ ಹಾಗೂ 11 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ. 910 ಅನುದಾನ ರಹಿತ ಶಾಲೆಗಳು ಶೇ.100 ಫಲಿತಾಂಶ ಹಾಗೂ 47 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ. ಒಟ್ಟಾರೆ 1550 ಶಾಲೆಗಳು ಶೇ.100 ಫಲಿತಾಂಶ ಹಾಗೂ 62 ಶೂನ್ಯ ಫಲಿತಾಂಶ ಪಡೆದಿವೆ.

ವಿಭಿನ್ನ ಸಾಮರ್ಥ್ಯವುಳ್ಳ ಅಭ್ಯರ್ಥಿಗಳು

ವಿವಿಧ ರೀತಿಯ ವಿಭಿನ್ನ ಸಾಮರ್ಥ್ಯವುಳ್ಳ 3573 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 2409 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಸುಮಾರು ಶೇ.67.42 ರಷ್ಟು ಫಲಿತಾಂಶ ಪಡೆದಿದ್ದಾರೆ.

ಜಿಲ್ಲೆಗಳಿಗೆ ರ‍್ಯಾಂಕಿಂಗ್‌ ಬದಲು ಗ್ರೇಡ್

ಇದೇ ಮೊದಲ ಬಾರಿಗೆ ಜಿಲ್ಲೆಗಳಿಗೆ ಗ್ರೇಡ್ ನೀಡಲಾಗಿದೆ. ರ‍್ಯಾಂಕಿಂಗ್‌ ಬದಲು, ಎ, ಬಿ ಮತ್ತು ಸಿ ಎಂದು ಗ್ರೇಡ್ ಕೊಡಲಾಗಿದೆ. ಒಂದು ಜಿಲ್ಲೆಯ ಒಟ್ಟು ಫಲಿತಾಂಶದಲ್ಲಿ ಶೇ 40ರಷ್ಟು, ಉಳಿದ ಪ್ರಮಾಣವನ್ನು ಅತ್ಯುನ್ನತ ದರ್ಜೆ ಮತ್ತು ಪ್ರಥಮ ದರ್ಜೆ ಪಡೆದ ವಿದ್ಯಾರ್ಥಿಗಳ ಸಂಖ್ಯೆಯ ಆಧಾರದ ಮೇಲೆ ಗ್ರೇಡ್ ನೀಡಲಾಗಿದೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಧುಗಿರಿ, ಮಂಡ್ಯ, ಚಿತ್ರದುರ್ಗ, ಕೋಲಾರ, ಉಡುಪಿ, ರಾಮನಗರ, ಹಾಸನ, ಉತ್ತರ ಕನ್ನಡ ಜಿಲ್ಲೆ ‘ಎ’ ಗ್ರೇಡ್‍ನಲ್ಲಿವೆ.

ಚಾಮರಾಜನಗರ, ದಕ್ಷಿಣ ಕನ್ನಡ, ಬಳ್ಳಾರಿ, ತುಮಕೂರು, ಶಿರಸಿ, ಬೆಂಗಳೂರು ಪೂರ್ವ, ದಾವಣಗೆರೆ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಕಲಬುರಗಿ, ಕೊಪ್ಪಳ, ಬೀದರ್, ವಿಜಯಪುರ, ಬಾಗಲಕೋಟೆ, ಧಾರವಾಡ, ರಾಯಚೂರು, ಬೆಂಗಳೂರು ದಕ್ಷಿಣ, ಚಿಕ್ಕೋಡಿ ‘ಬಿ’ದರ್ಜೆಯ ಶ್ರೇಣಿಯಲ್ಲಿವೆ. ಉಳಿದಂತೆ ಬೆಳಗಾವಿ, ಗದಗ, ಹಾವೇರಿ, ಯಾದಗಿರಿ ‘ಸಿ’ ದರ್ಜೆಯಲ್ಲಿವೆ.

ಸ್ಕ್ಯಾನ್ ಪ್ರತಿಗೆ ಅರ್ಜಿ 

ಜೂನ್-ಜುಲೈನಲ್ಲಿ ನಡೆದಿರುವ ಪರೀಕ್ಷೆಯ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಗಳನ್ನು ಪಡೆಯಲು ಅರ್ಜಿ ಸಲ್ಲಿಕೆಯು ಆ.11 ರಿಂದ ಆರಂಭವಾಗಲಿದ್ದು, ಅರ್ಜಿ ಸಲ್ಲಿಕೆಗೆ ಆ.20 ಕೊನೆಯ ದಿನವಾಗಿದೆ. ಅರ್ಜಿ ಶುಲ್ಕ ಪಾವತಿಗೆ ಕೊನೇ ದಿನ ಆ.21 ರಂದು ಆಗಿರುತ್ತದೆ(ಆನ್ಲೈನ್ ಪಾವತಿ ಸೌಲಭ್ಯ ಇಲ್ಲದವರು ಸರ್ಜಿ ಸಲ್ಲಿಕೆ ನಂತರ ಚಲನ್ ಡೌನ್ಲೋಡ್ ಮಾಡಿಕೊಂಡು ಬ್ಯಾಂಕಿನಲ್ಲಿ ಪಾವತಿಸಬಹುದು).

ಮರುಮೌಲ್ಯಮಾಪನಕ್ಕೆ ಅರ್ಜಿ

ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆ ಆ.14 ರಿಂದ ಆರಂಭವಾಗಲಿದ್ದು, ಆ.24 ಕೊನೆಯ ದಿನವಾಗಿದೆ. ಅರ್ಜಿ ಶುಲ್ಕ ಪಾವತಿಗೆ ಕೊನೇ ದಿನ ಆ.25 ರಂದು ಆಗಿದೆ(ಆನ್‍ಲೈನ್ ಪಾವತಿ ಸೌಲಭ್ಯ ಇಲ್ಲದವರು ಸರ್ಜಿ ಸಲ್ಲಿಕೆ ನಂತರ ಚಲನ್ ಡೌನ್ಲೋಡ್ ಮಾಡಿಕೊಂಡು ಬ್ಯಾಂಕಿನಲ್ಲಿ ಪಾವತಿಸಬಹುದಾಗಿದೆ).

ಮರು ಎಣಿಕೆಗೆ ನೇರ ಅರ್ಜಿ ಇಲ್ಲ

ಅಂಕಗಳ ಮರು ಎಣಿಕೆಗೆ ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಮರು ಎಣಿಕೆ ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಂಬಂಧಪಟ್ಟ ವಿಷಯದ ಉತ್ತರ ಪತ್ರಿಕೆಯ ಛಾಯಾಪ್ರತಿಯನ್ನು ಪಡೆಯಬೇಕಾಗುತ್ತದೆ. ನಂತರ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಿದ್ದರೆ, ಮಂಡಳಿಗೆ ಪತ್ರ ಬರೆದು ಸರಿಪಡಿಸಿಕೊಳ್ಳಬಹುದು. ಪರಿಷ್ಕೃತ ಫಲಿತಾಂಶವನ್ನು ಸಂಬಂಧಿಸಿದ ಶಾಲೆ ಕಳುಹಿಸಲಾಗುವುದು.

ಆನ್‍ಲೈನ್ ಮೂಲಕವೇ ಅರ್ಜಿ

ಸ್ಕ್ಯಾನ್ ಪ್ರತಿ ಅಥವಾ ಮರುಮೌಲ್ಯಮಾಪನಕ್ಕೆ ಆನ್‍ಲೈನ್ ಮೂಲಕ ಮಾತ್ರವೇ ಅರ್ಜಿ ಸಲ್ಲಿಕೆಗೆ ಅವಕಾಶ. ಅಂಚೆ ಅಥವಾ ಇನ್ನಾವುದೇ ಭೌತಿಕ ವಿಧಾನದಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. ಮಂಡಳಿಯ ಅಧಿಕೃತ ವೆಬ್‍ಸೈಟ್ www.kseeb.kar.nic.in ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ ಎಷ್ಟು

ಸ್ಕ್ಯಾನ್ ಪ್ರತಿ ಪಡೆಯಲು ಪ್ರತಿ ಒಂದು ವಿಷಯಕ್ಕೆ 405 ರೂಪಾಯಿ (ಆಫ್‍ಲೈನ್ ಚಲನ್ ಮೂಲಕ ಪಾವತಿಸಿದಲ್ಲಿ 410 ರೂಪಾಯಿ) ಹಾಗೂ ಮರುಮೌಲ್ಯಮಾಪನಕ್ಕೆ ಪ್ರತಿ ಒಂದು ವಿಷಯಕ್ಕೆ 805 ರೂಪಾಯಿ (ಆಫ್‍ಲೈನ್ ಚಲನ್ ಮೂಲಕ ಪಾವತಿಸಿದಲ್ಲಿ 810 ರೂಪಾಯಿ) ನಿಗದಿಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News