ಮಳೆ ಹಾನಿ: ಕೊಡಗು ಜಿಲ್ಲೆಯ ಹಲವೆಡೆ ಎಸ್ಸೆಸ್ಸೆಫ್ ಹೆಲ್ಪ್ ಡೆಸ್ಕ್, ಕ್ಯೂ ಟೀಂ ತಂಡದಿಂದ ಕಾರ್ಯಾಚರಣೆ

Update: 2020-08-10 13:59 GMT

ಕೊಡಗು, ಆ.10: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಸುರಿದ ಭಾರಿ ಮಳೆಗೆ ಜಿಲ್ಲೆಯ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಭೂಕುಸಿತ, ಮನೆ ಹಾನಿಗಳು ಸಂಭವಿಸಿತ್ತು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಸಮಿತಿ ಹೆಲ್ಪ್ ಡೆಸ್ಕ್ ಮತ್ತು ಕ್ಯೂಟೀಂ ಕಾರ್ಯಕರ್ತರು ಜಿಲ್ಲೆಯ ಹಲವೆಡೆ‌ ಮನೆಗಳ ದುರಸ್ತಿ, ನಿವಾಸಿಗಳ ಸ್ಥಳಾಂತರ, ಧಾರ್ಮಿಕ ಸ್ಥಳಗಳು, ವಿದ್ಯಾಸಂಸ್ಥೆಗಳು, ಮನೆಗಳ ಶುಚೀಕರಣ ಕಾರ್ಯಚರಣೆ ನಡೆಸಿದರು.

ಜಿಲ್ಲೆಯಲ್ಲಿ ಭಾರೀ ಮಳೆ ಗಾಳಿಗೆ ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈ ಹಿನ್ನೆಲೆ ಎಸ್ಸೆಸ್ಸೆಫ್ ಅಯ್ಯಂಗೇರಿ ಶಾಖೆ ವತಿಯಿಂದ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಮಳೆಗೆ ಜಲಾವೃತಗೊಂಡಿದ್ದ ಕೊಟ್ಟಮುಡಿಯ ಮರ್ಕಝ್ ವಿದ್ಯಾಸಂಸ್ಥೆಯ ಮಸೀದಿ, ಶಾಲಾ ಕಾಲೇಜು ಕಟ್ಟಡಗಳನ್ನು, ಮನೆಗಳನ್ನು ಎಸ್ಸೆಸ್ಸೆಫ್ ಕೊಟ್ಟಮುಡಿ ಶಾಖೆಯ ಕಾರ್ಯಕರ್ತರು ಸ್ವಚ್ಛಗೊಳಿಸಿದರು.

ಜಲಾವೃತಗೊಂಡಿದ ಚೆರಿಯಪರಂಬು ಮಸ್ಜಿದ್, ಮದರಸವನ್ನು ಎಸ್ಸೆಸ್ಸೆಫ್ ಚೆರಿಯಪರಂಬು ಶಾಖೆಯ ಕಾರ್ಯಕರ್ತರು ಸ್ವಚ್ಛಗೊಳಿಸಿದರು. ಎಮ್ಮೆಮಾಡುವಿನ ಹಲವು ಮನೆಗಳು ಹಾನಿಗೊಳಗಾಗಿದ್ದು, ಆ ಮನೆಗಳನ್ನು ಎಸ್ಸೆಸ್ಸಫ್ ಎಮ್ಮೆಮ್ಮಾಡು ಶಾಖೆಯ ಕಾರ್ಯಕರ್ತರು ಸರಿಪಡಿಸಿದರು.

ಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಸಮಿತಿ ಹೆಲ್ಪ್ ಡೆಸ್ಕ್ ಜಿಲ್ಲೆಯ ಹಲವು ಭಾಗಗಳಲ್ಲಿ ಕಾರ್ಯಕರ್ತರನ್ನು ಸಜ್ಜುಗೊಳಿಸಿದೆ. ಈಗಾಗಲೇ ಹಲವು ಪ್ರಳಯಭಾದಿತ ಪ್ರದೇಶಗಳಲ್ಲಿ ಕಾರ್ಯಚರಣೆಗಿಳಿದಿದ್ದಾರೆ. ಅಲ್ಲದೇ ಕೊಡಗಿನ ಮೂರು ತಾಲೂಕಿನಲ್ಲಿಯು ಹೆಲ್ಪ್ ಲೈನ್ ಪ್ರಾರಂಭಿಸಿದ್ದು, ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ಪ್ರಕಟನೆಯಲ್ಲಿ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News