ಪ್ರವಾಹ ಪರಿಹಾರ ಬಿಡುಗಡೆಯಲ್ಲಿ ಪ್ರಧಾನಿಯಿಂದ ರಾಜ್ಯಕ್ಕೆ ಅನ್ಯಾಯ: ಸತೀಶ್ ಜಾರಕಿಹೊಳಿ ಕಿಡಿ

Update: 2020-08-10 16:38 GMT

ಬೆಳಗಾವಿ, ಆ.10: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದಲ್ಲಿನ ಬರಗಾಲ, ಪ್ರವಾಹ ಸೇರಿ ಇಲ್ಲಿನ ಎಲ್ಲ ಸಮಸ್ಯೆಗಳ ಬಗ್ಗೆಯೂ ಅರಿವಿದೆ. ಆದರೂ ಪರಿಹಾರ ಬಿಡುಗಡೆ ಮಾಡುವ ಸಂದರ್ಭದಲ್ಲಿ ರಾಜ್ಯಕ್ಕೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.

ಸೋಮವಾರ ಬೆಳಗಾವಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷ ರಾಜ್ಯದಲ್ಲಿ ಪ್ರವಾಹ ಬಂದಾಗ ಹಾಗೂ ಬರಗಾಲ ಬಿದ್ದಾಗ ಕೇಂದ್ರ ಸರಕಾರ ಬೇರೆ ರಾಜ್ಯಗಳಿಗೆ ಹೆಚ್ಚಿನ ಪರಿಹಾರ ನೀಡಿ, ಕರ್ನಾಟಕಕ್ಕೆ ಕಡಿಮೆ ಪರಿಹಾರ ನೀಡಿದರು. ರಾಜ್ಯದ ಸಂಸದರು ಆಗಲಿ ಇದರ ಬಗ್ಗೆ ಒಂದು ಮಾತನ್ನು ಆಡದೆ ರಾಜ್ಯಕ್ಕೆ ಅನ್ಯಾಯ ಎಸಗಿದರು ಎಂದು ಕಿಡಿಕಾರಿದರು.

ಬೆಳಗಾವಿ ಜಿಲ್ಲೆಯಲ್ಲಿ ನಾಲ್ವರು ಸಚಿವರಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೊರೋನ ಸೋಂಕು ಹೆಚ್ಚುತ್ತಲೇ ಇದೆ. ಕಳೆದ ವರ್ಷ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಪರಿಹಾರವನ್ನು ನೀಡಿಲ್ಲ. ಮನೆಗಳನ್ನು ಕಟ್ಟಿಸಿಕೊಟ್ಟಿಲ್ಲ. ಇದರಿಂದ, ಜಿಲ್ಲೆಯ ಸಚಿವರ ಮಧ್ಯೆ ಸಮನ್ವಯತೆಯ ಕೊರತೆ ಇದೆ ಎಂದು ಹೇಳಿದರು.

ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆಗೆ ಯಾರ ವಿರೋಧವೂ ಇಲ್ಲ. ಆದರೂ ಇದರ ಬಗ್ಗೆ ಅರಿವಿಲ್ಲದ ಮಹಾರಾಷ್ಟ್ರದ ಮಾಧ್ಯಮಗಳು ಹೆಚ್ಚು ಪ್ರಚೋದಕ ಸುದ್ದಿ ಬಿತ್ತರಿಸುತ್ತಿವೆ. ಜೊತೆಗೆ ಯಾರೂ ಪುತ್ಥಳಿ ತೆರವು ಮಾಡಿಲ್ಲ. ಪ್ರತಿಷ್ಠಾಪನೆ ಮಾಡಿದವರೆ ತೆಗೆದುಕೊಂಡು ಹೋಗಿದ್ದಾರೆ. ಇದು ಸ್ಥಳೀಯ ಸಮಸ್ಯೆ, ಸ್ಥಳೀಯರೇ ಬಗೆಹರಿಸಿಕೊಳ್ಳುತ್ತಾರೆ ಎಂದು ತಿಳಿಸಿದರು. 

ಶಿವಸೇನೆ, ಎಂಇಎಸ್ ಮೊದಲಿನಿಂದಲೂ ಭಾಷಾ ರಾಜಕಾರಣ ಮಾಡಿಕೊಂಡು ಬಂದಿದೆ. ಕರಾಳ ದಿನ ಆಚರಿಸುವ ಮೂಲಕ ಭಾಷಾ ಸೌಹಾರ್ದತೆಗೆ ಧಕ್ಕೆ ತರುತ್ತಾರೆ. ಮಹಾರಾಷ್ಟ್ರದ ಬಿಜೆಪಿ ಶಾಸಕನಿಗೆ ಇಲ್ಲಿಯ ಸಮಸ್ಯೆ ಗೊತ್ತಿಲ್ಲ. ಸುಖಾಸುಮ್ಮನೆ ಆರೋಪ ಮಾಡಿ, ರಾಜಕಾರಣ ಮಾಡಿದ್ದಾರೆ. ಇಲ್ಲಿನ ಸಮಸ್ಯೆ ಪರಿಹರಿಸಲು ಹೊಸದಿಲ್ಲಿ, ಮುಂಬೈಯಿಂದ ಯಾರು ಬರಬೇಕಿಲ್ಲ. ಛತ್ರಪತಿ ಶಿವಾಜಿ ಬಗ್ಗೆ ನಮಗೂ ಅಪಾರ ಗೌರವವಿದೆ. ನಾವೂ ಸರಕಾರದ ವತಿಯಿಂದ ಶಿವಾಜಿ ಜಯಂತಿ ಮಾಡುತ್ತಿದ್ದೇವೆ ಎಂದು ಟೀಕಾಕಾರರಿಗೆ ಉತ್ತರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News