ಬೆಂಗಳೂರಿನಲ್ಲಿ ಮತ್ತೆ 1,243 ಮಂದಿಗೆ ಕೊರೋನ ದೃಢ: 75 ಸಾವಿರ ದಾಟಿದ ಸೋಂಕಿತರ ಸಂಖ್ಯೆ

Update: 2020-08-10 16:52 GMT

ಬೆಂಗಳೂರು, ಆ.9: ನಗರದಲ್ಲಿ ಸೋಮವಾರ ಒಂದೆ ದಿನ 1,243 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿಗೆ 36 ಜನರು ಮೃತರಾಗಿದ್ದಾರೆ.

ನಗರದಲ್ಲಿ ಇಲ್ಲಿಯವರಗೆ ಒಟ್ಟು 75,428 ಮಂದಿಗೆ ಕೊರೋನ ಸೋಂಕಿತರು ದೃಢಪಟ್ಟಿದ್ದು, ಇಲ್ಲಿಯವರೆಗೆ ನಗರದಲ್ಲಿ 1,276 ಜನರು ಸೋಂಕಿಗೆ ಬಲಿಯಾಗಿದ್ದಾರೆ. 41,166 ಜನರು ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನು ಸೋಮವಾರ 2037 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 32,385 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 87,300 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. ಅಲ್ಲದೆ ನಗರದಲ್ಲಿ 324 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಗ್ಯ ಸಚಿವರ ಕಚೇರಿ ಸೀಲ್‍ಡೌನ್

ಸಚಿವ ಶ್ರೀರಾಮುಲು ಅವರಿಗೆ ಕೊರೋನ ಪಾಸಿಟಿವ್ ಬಂದ ಹಿನ್ನೆಲೆ ವಿಧಾನಸೌಧದ ಶ್ರೀರಾಮುಲು ಅವರ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದೆ.

ಸದ್ಯ ಶ್ರೀರಾಮುಲು ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಕಚೇರಿಯನ್ನು ಸ್ಯಾನಿಟೈಸ್ ಮಾಡಿ ಸೀಲ್‍ಡೌನ್ ಮಾಡಲಾಗಿದೆ. ಅವರ ಕಚೇರಿ ಮಾತ್ರಲ್ಲದೇ ಆಪ್ತ ಕಾರ್ಯದರ್ಶಿಗಳ ಕಚೇರಿ ಹಾಗೂ ಅಕ್ಕಪಕ್ಕದ ಎಲ್ಲಾ ಕಚೇರಿಗಳನ್ನು ಸಹ ಸ್ಯಾನಿಟೈಸ್ ಮಾಡಲಾಗಿದೆ.

ಮೃತದೇಹ ಸಾಗಿಸಲು ಹಣ ಕೇಳಿದ ಆಂಬ್ಯುಲೆನ್ಸ್ ಡ್ರೈವರ್: ಆರೋಪ

ಹಣ ನೀಡುವವರೆಗೂ ಕೊರೋನ ಸೋಂಕಿತರ ಮೃತದೇಹವನ್ನು ಆಂಬ್ಯುಲೆನ್ಸ್ ನಲ್ಲಿ ಸಾಗಿಸಲು ಸತಾಯಿಸಿ, ಹಣ ನೀಡಿದ ಬಳಿಕ ಮೃತದೇಹದ ಅಂತ್ಯಕ್ರಿಯೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಯಶವಂತಪುರ ನಿವಾಸಿಯೊಬ್ಬರಿಗೆ ಹೃದಯ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ. ಆದರೆ ಆಸ್ಪತ್ರೆಗೆ ತಲುಪುವ ಮುಂಚೆಯೇ ವ್ಯಕ್ತಿ ಮೃತಪಟ್ಟಿದ್ದಾರೆ. ಹೀಗಾಗಿ ಮೃತ ವ್ಯಕ್ತಿಗೆ ಹೆಗ್ಗನಹಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ಕೊರೋನ ಟೆಸ್ಟ್ ಮಾಡಿಸಿದ್ದು, ಪಾಸಿಟಿವ್ ವರದಿ ಬಂದಿದೆ.

ಬಳಿಕ ಮೃತದೇಹ ಸಾಗಿಸಲು ಆಂಬುಲೆನ್ಸ್ ಸಿಬ್ಬಂದಿ 30 ಸಾವಿರ ರೂ. ಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಜೊತೆಗೆ ಹಣ ನೀಡಿದರೆ ಆಂಬ್ಯುಲೆನ್ಸ್ ಚಾಲಕರೇ ಅಂತ್ಯಕ್ರಿಯೆ ಮಾಡುವುದಾಗಿ ಹೇಳಿದ್ದಾರೆ. ಕೊನೆಗೆ ಆಂಬ್ಯುಲೆನ್ಸ್ ಚಾಲಕರ ಒತ್ತಡಕ್ಕೆ ಮಣಿದ ಕುಟುಂಬಸ್ಥರು 30 ಸಾವಿರ ಹಣ ನೀಡಿದ್ದಾರೆ. ಹೀಗಾಗಿ ಹಣ ಪಡೆದ ಆಂಬ್ಯುಲೆನ್ಸ್ ಸಿಬ್ಬಂದಿ ಪಿಪಿಇ ಕಿಟ್ ಧರಿಸದೆ, ಬಿಬಿಎಂಪಿ ಅಧಿಕಾರಿಗಳ ನಿರ್ದೇಶನವೂ ಇಲ್ಲದೆ ತಾವೇ ಅಂತ್ಯಕ್ರಿಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 

ಪ್ರತಿ ವಾರ್ಡ್ ನಲ್ಲಿ ಕೊರೋನ ಟೆಸ್ಟ್

ನಗರದಲ್ಲಿ ಕೊರೋನ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಟೆಸ್ಟ್ ಗಳನ್ನು ಹೆಚ್ಚಿಸಲು ಮುಂದಾಗಿದ್ದು, ಈಗ ಪ್ರತಿ ವಾರ್ಡ್ ನಲ್ಲೂ ಕೊರೋನ ಟೆಸ್ಟ್ ಮಾಡಲು ಮುಂದಾಗಿದೆ. ಪ್ರತಿನಿತ್ಯ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೂ ಟೆಸ್ಟಿಂಗ್ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ.

ಈ ಸಂಬಂಧ ಈಗ ಬಿಬಿಎಂಪಿ ದಕ್ಷಿಣ ವಲಯದಲ್ಲಿ ಮೊಬೈಲ್ ಟೆಸ್ಟಿಂಗ್ ವ್ಯಾನ್ ಮೂಲಕ ಉಚಿತ ಪರೀಕ್ಷೆ ಆರಂಭಿಸಿದೆ. ದಕ್ಷಿಣ ವಲಯ ಜಂಟಿ ಆಯುಕ್ತ ವೀರಭದ್ರಸ್ವಾಮಿ ನೇತೃತ್ವದಲ್ಲಿ ಕೊರೋನ ಟೆಸ್ಟಿಂಗ್ ಆರಂಭವಾಗಿದೆ. ಟೆಸ್ಟ್ ಮಾಡಿಸಿಕೊಳ್ಳಲು ಬರುವವರು ಸಹಾಯವಾಣಿ ನಂಬರ್ 8431816718ಗೆ ಕರೆ ಮಾಡಬಹುದು ಎಂದು ಬಿಬಿಎಂಪಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News