ನೆರೆ ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ನೀಡಲು ಕ್ರಮ: ಸಚಿವ ಆರ್.ಅಶೋಕ್

Update: 2020-08-10 17:14 GMT

ಬೆಂಗಳೂರು, ಆ. 10: ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ರಾಜ್ಯ ಸರಕಾರ ಸ್ಥಾಪಿಸಿರುವ ಕಾಳಜಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ನೀಡಲಾಗುತ್ತಿದ್ದು, ಮಧ್ಯಾಹ್ನ ಮತ್ತು ರಾತ್ರಿ ವೇಳೆ ಊಟದ ಜತೆಗೆ ಮೊಟ್ಟೆ, ಪಲ್ಯ ಮತ್ತು ಮೊಸರನ್ನು ನೀಡಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಹೇಳಿದ್ದಾರೆ.

ಸೋಮವಾರ ಪ್ರವಾಹ ಪೀಡಿತ ರಾಜ್ಯಗಳೊಂದಿಗೆ ಪ್ರಧಾನಿ ಮೋದಿಯವರೊಂದಿಗಿನ ವಿಡಿಯೋ ಸಂವಾದದ ಬಳಿಕ ಮಾತನಾಡಿದ ಅವರು, ನೆರೆ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಗುಣಮಟ್ಟದ ಆಹಾರ ನೀಡಲು ಉದ್ದೇಶಿಸಲಾಗಿದೆ. ಈ ಹಿಂದೆ ನೀಡುತ್ತಿದ್ದ ಅನ್ನ, ಸಂಬಾರ್ ಬದಲಿಗೆ ಪೌಷ್ಟಿಕಾಂಶವುಗಳ್ಳ ಆಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ನೆರೆ ಪೀಡಿತ ಪ್ರದೇಶಗಳಲ್ಲಿ ಈಗಾಗಲೇ ಪ್ರವಾಸ ಕೈಗೊಂಡಿದ್ದು, ಪರಿಸ್ಥಿತಿಯನ್ನು ಖುದ್ದು ಅವಲೋಕಿಸಿದ್ದೇನೆ. ಹೆಚ್ಚು ಪ್ರವಾಹ ಸ್ಥಿತಿ ಎದುರಾಗುವ 10 ಜಿಲ್ಲೆಯಲ್ಲಿ ಶಾಶ್ವತವಾಗಿ ಪುನಃಶ್ಚೇತನ ಭವನ ನಿರ್ಮಿಸಲು ತೀರ್ಮಾನಿಸಲಾಗಿದೆ. ಭವನದಲ್ಲಿ ಆಸ್ಪತ್ರೆ, ಗ್ರಂಥಾಲಯ, ವಾಸ್ತವ್ಯ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆ ಸೌಲಭ್ಯ ಕಲ್ಪಿಸಲಾಗುವುದು ಎಂದ ಅವರು, ಭವನ ನಿರ್ಮಾಣಕ್ಕೆ 200 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದರು.

ನೆರೆ ಸಂತ್ರಸ್ತರ ಆರೋಗ್ಯದ ದೃಷ್ಟಿಯಿಂದ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಬೇಕು. ರ್ಯಾಪಿಡ್ ಪರೀಕ್ಷೆ ನಡೆಸುವಂತೆ ತಿಳಿಸಲಾಗಿದೆ. ಕೋವಿಡ್ ಸೋಂಕಿತರಿಗೆ ಪ್ರತ್ಯೇಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಕೇಂದ್ರದ ಮಾರ್ಗಸೂಚಿ ಅನ್ವಯ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ 10 ಸಾವಿರ ರೂ.ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಪ್ರತಿ ಕುಟುಂಬಕ್ಕೆ 3,800 ರೂ. ಮತ್ತು ಹೆಚ್ಚುವರಿಯಾಗಿ ರಾಜ್ಯ ಸರಕಾರ 6,200 ರೂ. ಸೇರಿ ಒಟ್ಟು 10 ಸಾವಿರ ರೂ. ಪರಿಹಾರ ಪ್ರತಿ ಕುಟುಂಬಕ್ಕೆ ನೀಡಲು ಸರಕಾರ ಈಗಾಗಲೇ ಆದೇಶಿಸಿದೆ. ಶೇ.75ಕ್ಕಿಂತ ಹೆಚ್ಚು ಸಂಪೂರ್ಣ ಮನೆಹಾನಿಯಾಗಿದ್ದರೆ 5 ಲಕ್ಷ ರೂ., ಶೇ.25-ಶೇ.75ರಷ್ಟು ಭಾಗಶಃ ಹಾನಿಯಾಗಿದ್ದು ಹೊಸದಾಗಿ ನಿರ್ಮಿಸಲು ಮುಂದಾದರೆ 5 ಲಕ್ಷ ರೂ., ದುರಸ್ತಿಗೆ 3 ಲಕ್ಷ ರೂ. ಮತ್ತು ಅಲ್ಪ-ಸ್ವಲ್ಪ ಮನೆ ಹಾನಿಯಾಗಿದ್ದರೆ 50 ಸಾವಿರ ರೂ.ನೆರವು ನೀಡಲಾಗುತ್ತಿದೆ ಎಂದು ವಿವರ ನೀಡಿದರು.

ಪರಿಹಾರ ನೀಡಲಾಗಿದೆ: 2019ರಲ್ಲಿ ರಾಜ್ಯದಲ್ಲಿನ ನೆರೆಯಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವು ನೀಡಿಲ್ಲ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿದ ಅವರು, ಎಲ್ಲ ಜಿಲ್ಲೆಗಳಲ್ಲಿನ ಜನರಿಗೆ ನೆರವು ನೀಡಲಾಗಿದೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಆದರೆ, ಕೆಲವರು ಒಂದು ಲಕ್ಷ ರೂ.ಪಡೆದು ಕಾಮಗಾರಿ ಆರಂಭಿಸದ ಹಿನ್ನೆಲೆಯಲ್ಲಿ ಸರಕಾರ ಹಣ ಬಿಡುಗಡೆ ಮಾಡಿಲ್ಲ. ಫಲಾನುಭವಿಗಳು ಸರಕಾರದಿಂದ ಹಣ ಪಡೆದು ಮನೆ ನಿರ್ಮಿಸಿಕೊಳ್ಳಬೇಕು ಎಂದು ಅಶೋಕ್ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News