ಕೋರ್ಟ್ ಗಳ ಸಿಬ್ಬಂದಿಯ ಕ್ವಾರಂಟೈನ್ ಅವಧಿಯನ್ನು ಕೆಲಸದಂತೆ ಪರಿಗಣಿಸಿ: ಹೈಕೋರ್ಟ್ ಸೂಚನೆ

Update: 2020-08-10 17:42 GMT

ಬೆಂಗಳೂರು, ಆ.10: ರಾಜ್ಯದ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳ ಸಿಬ್ಬಂದಿ ಕ್ವಾರಂಟೈನ್ ಒಳಗಾದಲ್ಲಿ ಆ ಅವಧಿಯನ್ನು ಕೆಲ ಷರತ್ತುಗಳ ಮೇರೆಗೆ ಕೆಲಸದ ಅವಧಿಯಂತೆ ಪರಿಗಣಿಸಲು ಎಲ್ಲ ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ಹೈಕೋರ್ಟ್ ಸೂಚನೆ ನೀಡಿದೆ.

ರಾಜ್ಯದ ನ್ಯಾಯಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಕಷ್ಟು ಸಿಬ್ಬಂದಿ ಕೊರೋನ ಸೋಂಕಿನ ಪರಿಣಾಮ ಕ್ವಾರಂಟೈನ್‍ಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಕ್ರಮ ಕೈಗೊಂಡಿದೆ. ಈ ಕುರಿತು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರ ಆದೇಶದ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಅವರು ಸುತ್ತೋಲೆ ಹೊರಡಿಸಿದ್ದಾರೆ.

ಸುತ್ತೋಲೆಯಲ್ಲಿ, ರಾಜ್ಯದ ಯಾವುದೇ ಜಿಲ್ಲಾ ಅಥವಾ ವಿಚಾರಣಾ ನ್ಯಾಯಾಲಯದ ಸಿಬ್ಬಂದಿ ಕೊರೋನ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಒಳಗಾದಲ್ಲಿ, ವೈದ್ಯಕೀಯ ಶಿಫಾರಸು ಮೇರೆಗೆ ಕ್ವಾರಂಟೈನ್‍ಗೆ ತೆರಳುವ ಮುನ್ನ ಅಥವಾ ಸೋಂಕಿಗೆ ತುತ್ತಾದಲ್ಲಿ ಈ ಬಗ್ಗೆ ಕೂಡಲೇ ತಮ್ಮ ವಿಭಾಗದ ಮುಖ್ಯಸ್ಥರಿಗೆ ವಿಷಯ ಮುಟ್ಟಿಸಬೇಕು. ವಿಭಾಗದ ಮುಖ್ಯಸ್ಥರು ಈ ವರದಿಯನ್ನು ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ತಲುಪಿಸಬೇಕು. ಕ್ವಾರಂಟೈನ್ ಅವಧಿ ಮುಗಿದ ಬಳಿಕ ಸಿಬ್ಬಂದಿ, ಜಿಲ್ಲಾ ಅಥವಾ ತಾಲೂಕು ವೈದ್ಯಾಧಿಕಾರಿಗಳಿಂದ ತಾವೆಷ್ಟು ಕಾಲ ಕ್ವಾರಂಟೈನ್ ಗೆ ಒಳಗಾಗಿದ್ದೇವೆಂಬ ವೈದ್ಯಕೀಯ ದಾಖಲೆಗಳನ್ನು ಪಡೆದು ತಮ್ಮ ವಿಭಾಗದ ಮುಖ್ಯಸ್ಥರಿಗೆ ನೀಡಬೇಕು.

ವಿಭಾಗದ ಮುಖ್ಯಸ್ಥರು ಸಿಬ್ಬಂದಿಯ ಕ್ವಾರಂಟೈನ್ ವರದಿಯನ್ನು ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ಸಲ್ಲಿಸಬೇಕು. ವರದಿ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನಂತರ ಸರಿ ಇದೆ ಎನ್ನಿಸಿದರೆ ಮಾತ್ರ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಹೈಕೋರ್ಟ್ ಗೆ ಈ ಕುರಿತು ಮಾಹಿತಿ ನೀಡಿ ಸಿಬ್ಬಂದಿಯ ಕ್ವಾರಂಟೈನ್ ಅವಧಿಯನ್ನು ಕೆಲಸದ ಅವಧಿಯಾಗಿ ಪರಿಗಣಿಸಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸುತ್ತೋಲೆಯನ್ನು, ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ಸೇರಿದಂತೆ ರಾಜ್ಯದ ಎಲ್ಲ ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ, ಸಣ್ಣ ಪ್ರಕರಣಗಳ ಮುಖ್ಯ ನ್ಯಾಯಾಧೀಶರಿಗೆ, ಕೌಟುಂಬಿಕ ನ್ಯಾಯಾಲಯಗಳ ಪ್ರಧಾನ ನ್ಯಾಯಾಧೀಶರಿಗೆ, ಕೈಗಾರಿಕಾ ನ್ಯಾಯಾಧಿಕರಣಗಳ ಮತ್ತು ಕಾರ್ಮಿಕ ನ್ಯಾಯಾಲಯಗಳ ನ್ಯಾಯಾಧೀಶರಿಗೆ ತಲುಪಿಸಿರುವ ಹೈಕೋರ್ಟ್ ಈ ಮಾಹಿತಿಯನ್ನು ರಾಜ್ಯದ ಉಳಿದೆಲ್ಲ ನ್ಯಾಯಾಂಗ ಅಧಿಕಾರಿಗಳಿಗೆ ತಲುಪಿಸುವಂತೆ ಸೂಚಿಸಿದೆ. ಹಾಗೆಯೇ ಕ್ವಾರಂಟೈನ್ ಅವಧಿಯನ್ನು ಕೆಲಸದ ಅವಧಿಯಂತೆ ಪರಿಗಣಿಸುವ ಸಂದರ್ಭದಲ್ಲಿ ಹೈಕೋರ್ಟ್ ಸೂಚನೆಗಳನ್ನು ಎಚ್ಚರಿಕೆಯಿಂದ ಅನ್ವಯಿಸುವಂತೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News