ತಲಕಾವೇರಿಯಲ್ಲಿ ಪೂಜಾ ಕೈಂಕರ್ಯ ಪುನರ್ ಆರಂಭಿಸಲು ನಿರ್ಧಾರ

Update: 2020-08-10 18:12 GMT

ಮಡಿಕೇರಿ, ಆ.10: ಇತ್ತೀಚೆಗೆ ತಲಕಾವೇರಿ ಕ್ಷೇತ್ರದಲ್ಲಿ ಸಂಭವಿಸಿದ ಭೂ ಕುಸಿತದಿಂದಾಗಿ ಶ್ರೀ ತಲಕಾವೇರಿ ದೇವಾಲಯದಲ್ಲಿ ದೈನಂದಿನ ಪೂಜಾ ಕೈಕಂಕರ್ಯಗಳಿಗೆ ಅಡಚಣೆಯಾಗಿದ್ದು, ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಪೂಜಾ ಕಾರ್ಯ ಪುನರ್ ಆರಂಭಿಸುವ ಬಗ್ಗೆ ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಡೆಯಿತು. 

ಭಾಗಮಂಡಲದಲ್ಲಿ ನಡೆದ ಸಭೆಯಲ್ಲಿ ತಲಕಾವೇರಿ ದೇವಾಲಯದ ರಸ್ತೆ ಸಂಚಾರಕ್ಕೆ ಯೋಗ್ಯವಾದ ನಂತರ ಧಾರ್ಮಿಕ ಪರಿಹಾರ ಕಾರ್ಯಗಳನ್ನು ಕೈಗೊಂಡು ದೈನಂದಿನ ಪೂಜಾ ಕಾರ್ಯ ಹಾಗೂ ವಿಧಿ ವಿಧಾನಗಳನ್ನು ಕೈಗೊಳ್ಳಲು ಸರ್ವಾನುಮತದಿಂದ ನಿರ್ಧರಿಸಲಾಯಿತು. ತಲಕಾವೇರಿ ಕ್ಷೇತ್ರವು ಕೊಡಗಿನ ಪುಣ್ಯಕ್ಷೇತ್ರವಾಗಿದ್ದು, ಕ್ಷೇತ್ರದ ಭಕ್ತಾಧಿಗಳ ಭಾವನೆಗೆ ಧಕ್ಕೆಯಾಗದಂತೆ ತಂತ್ರಿಯವರ ಸಲಹೆ ಮಾರ್ಗದರ್ಶನ ಪಡೆಯಲು ಹಲವರು ಸಲಹೆ ನೀಡಿದರು. 

ಸಭೆಯ ಆರಂಭದಲ್ಲಿ ಭಾಗಮಂಡಲ ಭಗಂಡೇಶ್ವರ-ತಲಕಾವೇರಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಿ.ಎಸ್.ತಮ್ಮಯ್ಯ ಅವರು ಮಾತನಾಡಿ, ತಲಕಾವೇರಿ ದೇವಾಲಯ ಬಳಿ ಭೂಕುಸಿತ ಉಂಟಾಗಿ ಅವಘಡ ಸಂಭವಿಸಿದೆ. ಇದು ಆಗಬಾರದಿತ್ತು, ಆಗಿ ಹೋಗಿದೆ. ತಂತ್ರಿಗಳ ಸಲಹೆಯಂತೆ ಪೂಜಾ ಕಾರ್ಯ ಆರಂಭಿಸಬೇಕಿದೆ ಎಂದು ಅವರು ಹೇಳಿದರು.

ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರು ಮಾತನಾಡಿ, ದೇವಾಲಯದಲ್ಲಿ ಇದುವರೆಗೆ ಪೂಜಾ ಕಾರ್ಯಗಳು ನಿಂತಿರಲಿಲ್ಲ. ಭೂಕುಸಿತದಿಂದಾಗಿ ತಲಕಾವೇರಿ ದೇವಾಲಯಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಕಳೆದ ಒಂದು ವಾರದಿಂದ ಪೂಜೆ ಕಾರ್ಯ ನಿಂತು ಹೋಗಿದೆ. ರುದ್ರಾಭಿಷೇಕ, ಗಣಪತಿ ಹೋಮ ಮತ್ತಿತರ ಪೂಜಾ ಕಾರ್ಯ ಕೈಗೊಂಡು ತಂತ್ರಿಗಳ ಮಾರ್ಗದರ್ಶನ ಹಾಗೂ ಭಕ್ತರ ಭಾವನೆಗೆ ಧಕ್ಕೆಯಾಗದಂತೆ ಪೂಜಾ ಕಾರ್ಯವನ್ನು ಪುನರ್ ಆರಂಭಿಸಬೇಕಿದೆ ಎಂದು ಅವರು ಸಲಹೆ ಮಾಡಿದರು. 

ಮತ್ತೊಬ್ಬ ಸಮಿತಿ ಸದಸ್ಯ ಸಣ್ಣುವಂಡ ಡಾ.ಕಾವೇರಪ್ಪ ಅವರು ಮಾತನಾಡಿ, ತಲಕಾವೇರಿಯಲ್ಲಿ ಭಗ್ನಗೊಂಡ ಅಗಸ್ತ್ಯೇಶ್ವರ ವಿಗ್ರಹಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಆ ವಿಗ್ರಹ ವಿಸರ್ಜನೆಯಾಗದೆ ದೇವಸ್ಥಾನದಲ್ಲಿಯೇ ಉಳಿದಿದೆ. ಅದನ್ನು ಸಂಬಂಧಪಟ್ಟವರ ಜೊತೆ ಚರ್ಚಿಸಿ ವಿಸರ್ಜಿಸುವ ಕಾರ್ಯ ಆಗಬೇಕು ಎಂದರು. ಅಲ್ಲದೆ ಭಾಗಮಂಡಲ ಪಟ್ಟಣದ ಒಳಚರಂಡಿ ಕಾರ್ಯ ನೆನೆಗುದಿಗೆ ಬಿದ್ದಿದ್ದು, ಈ ಕಾರ್ಯ ಭಾಗಮಂಡಲದ ಮೇಲ್ಸೇತುವೆ ಕಾಮಗಾರಿಗೂ ಮೊದಲೇ ಪೂರ್ಣಗೊಳಿಸಬೇಕು ಎಂದು ಅವರು ಕೋರಿದರು. 

ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಒಳಚರಂಡಿ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದರು. 

ಅರ್ಚಕ ರಾಜೇಶ್ ಆಚಾರ್ ಅವರು ತಲಕಾವೇರಿಯಲ್ಲಿ ರುದ್ರಾಭಿಷೇಕ, ನೈವೇದ್ಯ ಪೂಜಾ ಕಾರ್ಯ ಮಾಡಬೇಕಿದೆ. ನಿತ್ಯ ಪೂಜೆ ಜೊತೆಗೆ ಎಷ್ಟು ದಿನ ಪೂಜೆ ನಡೆದಿಲ್ಲ, ಅದೂ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮ ಏರ್ಪಡಿಸಬೇಕಿದೆ ಎಂದರು. 

ಶಾಸಕ ಕೆ.ಜಿ.ಬೋಪಯ್ಯ ಅವರು ಮಾತನಾಡಿ ತಲಕಾವೇರಿ ದೇವಾಲಯದಲ್ಲಿ ಯಾವುದೇ ಕಾರಣಕ್ಕೂ ಪೂಜಾ ಕಾರ್ಯ ನಿಲ್ಲಿಸಬಾರದು. ಇತರರ ಮಾತುಗಳಿಗೆ ಕಿವಿಗೊಡಬಾರದು ಎಂದು ಸಲಹೆ ನೀಡಿದರು. ಮೃತ ದೇಹ ಸಿಗುವವರೆಗೆ ತಲಕಾವೇರಿ ದೇವಾಲಯಕ್ಕೆ ತೆರಳಲು ದಾರಿ ಮಾಡುವುದು ಕಷ್ಟಸಾಧ್ಯವಾಗಿದೆ ಎಂದರು. 

ಬ್ರಹ್ಮಗಿರಿ ಬೆಟ್ಟವಲ್ಲ
ತಲಕಾವೇರಿ ಬಳಿಯ ಬೆಟ್ಟ ಕುಸಿತ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿತ ಎಂಬ ವರದಿಗೆ ಸಂಬಂಧಿಸಿದಂತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೆ.ಜಿ.ಬೋಪಯ್ಯ ಅವರು ಈಗ ಭೂಕುಸಿತವಾಗಿರುವುದು ಗಜಗಿರಿ ಬೆಟ್ಟವಾಗಿದ್ದು, ಬ್ರಹ್ಮಗಿರಿ ಬೆಟ್ಟವಲ್ಲ ಎಂದು ತಿಳಿಸಿದರು. 

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಮಾತನಾಡಿ ಯಾವುದೇ ಕಾರಣಕ್ಕೂ ಪೂಜೆ ಸ್ಥಗಿತಗೊಳಿಸಬಾರದು. ಸಂಪ್ರದಾಯದಂತೆ ಪೂಜಾ ಕಾರ್ಯಗಳನ್ನು ಕೈಗೊಳ್ಳಬೇಕೆಂದರು.

ನಿಷ್ಕಲ್ಮಶವಾಗಿ, ಶಾಸ್ತ್ರೋಕ್ತವಾಗಿ ಪೂಜೆ ಮಾಡಬೇಕು, ಯಾವುದೇ ಲೋಪ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದು ಸಚಿವರು ಸಲಹೆ ನೀಡಿದರು. ಭಾಗಮಂಡಲ-ತಲಕಾವೇರಿ ದೇವಾಲಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಇತರರು ಇದ್ದರು.

ಸಂಸದ ಪ್ರತಾಪ್‍ ಸಿಂಹ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಮತ್ತಿತರರು ಸಭೆಯಲ್ಲಿ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News