ಎಸೆಸೆಲ್ಸಿ ಫಲಿತಾಂಶ: ರಾಜ್ಯದ 'ಎ' ಶ್ರೇಣಿಯ 10 ಜಿಲ್ಲೆಗಳ ಪಟ್ಟಿಯಲ್ಲಿ ಕೋಲಾರ

Update: 2020-08-10 18:20 GMT

ಕೋಲಾರ, ಆ.10: ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯದ 'ಎ' ಶ್ರೇಣಿ ಪಡೆದ 10 ಜಿಲ್ಲೆಗಳ ಪಟ್ಟಿಯಲ್ಲಿ ಕೋಲಾರವೂ ಸ್ಥಾನ ಪಡೆದುಕೊಂಡಿದೆ ಮತ್ತು ನಗರದ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿನಿ ಕೆ.ರಚನಾ 623 ಅಂಕ ಗಳಿಸುವ ಮೂಲಕ ಜಿಲ್ಲೆಗೆ ಮೊದಲಿಗಳಾಗಿ ಹೊರಹೊಮ್ಮಿದ್ದಾರೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಡಿಡಿಪಿಐ ಕೆ.ಎಂ.ಜಯರಾಮರೆಡ್ಡಿ ಹಾಗೂ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರ ಪ್ರಸಾದ್, ಇದೇ ಮೊದಲ ಬಾರಿಗೆ ಗ್ರೇಡ್ ಆಧಾರದಂತೆ ಜಿಲ್ಲಾವಾರು ಫಲಿತಾಂಶ ನೀಡಿದ್ದು, ಜಿಲ್ಲೆಯೂ ಎ ಶ್ರೇಣಿಯ ಸಾಧನೆ ಮಾಡಿದೆ ಎಂದು ತಿಳಿಸಿದ್ದಾರೆ.

ರಚನಾಗೆ 623 ಅಂಕ; ಜಿಲ್ಲೆಗೆ ಪ್ರಥಮ
ನಗರದ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿನಿ ಕೆ.ರಚನಾ ಗಣಿತದಲ್ಲಿ 98 ಹೊರತು ಪಡಿಸಿ ಉಳಿದೆಲ್ಲಾ ಐದು ವಿಷಯಗಳಲ್ಲಿ ಶೇ.100 ಅಂಕಗಳೊಂದಿಗೆ 625 ಅಂಕಗಳಿಗೆ 623 ಅಂಕ ಗಳಿಸುವ ಮೂಲಕ ಜಿಲ್ಲೆಗೆ ಮೊದಲಿಗಳಾಗಿದ್ದಾರೆ.

ಶ್ರೀನಿವಾಸಪುರದ ಜಿ.ಜಿ.ವೇಣು ವಿದ್ಯಾಲಯದ ಎಲ್.ದೀಕ್ಷಾ ಇಂಗ್ಲೀಷ್, ಹಿಂದಿ ವಿಜ್ಞಾನಗಳಲ್ಲಿ ಶೇ.100 ಅಂಕಗಳೊಂದಿಗೆ ಒಟ್ಟು 621 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಉಳಿದಂತೆ ಅದೇ ಶಾಲೆಯ ಬಿ.ವಿ.ಅಭಿಷೇಕ್- ಕನ್ನಡ, ಹಿಂದಿ, ಗಣಿತದಲ್ಲಿ ಶೇ.100 ಅಂಕಗಳೊಂದಿಗೆ ಒಟ್ಟು 620 ಅಂಕ, ಆರ್.ಹೃತ್ವಿಕ್‍ಗೆ-618 ಹಾಗೂ ಆರ್.ಶ್ರೀಶಾ ರಂಗನಾನಾಥ್ ಕನ್ನಡ, ಇಂಗ್ಲೀಷ್, ಗಣಿತ, ವಿಜ್ಞಾನದಲ್ಲಿ 100 ಅಂಕಗಳ ಸಾಧನೆಯೊಂದಿಗೆ ಒಟ್ಟು 618 ಅಂಕ ಪಡೆದುಕೊಂಡು ನಂತರ ಸ್ಥಾನ ಪಡೆದುಕೊಂಡಿದ್ದಾರೆ. 

ಐದು ತಾಲೂಕುಗಳು ಎ.ಶ್ರೇಣಿ ಸಾಧನೆ
ಜಿಲ್ಲೆಯ ಆರು ತಾಲೂಕುಗಳಲ್ಲಿ ಕೆಜಿಎಫ್ ಮಾತ್ರ ಬಿ. ಶ್ರೇಣಿ ಗಳಿಸಿದ್ದು, ಉಳಿದ ಎಲ್ಲಾ ಐದು ತಾಲೂಕುಗಳು ಎ.ಶ್ರೇಣಿ ಫಲಿತಾಂಶ ಪಡೆದುಕೊಂಡಿವೆ ಎಂದು ಡಿಡಿಪಿಐ ಕೆ.ಎಂ.ಜಯರಾಮರೆಡ್ಡಿ ತಿಳಿಸಿದ್ದಾರೆ.

ತಾಲೂಕುವಾರು ಗಮನಿಸಿದಾಗ ಜಿಲ್ಲೆಯ ಒಟ್ಟು 354 ಪ್ರೌಢಶಾಲೆಗಳ ಪೈಕಿ 244 ಶಾಲೆಗಳು ಶೇ.75ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಎ.ಶ್ರೇಣಿ ಪಡೆದುಕೊಂಡಿವೆ. 83 ಶಾಲೆಗಳು ಬಿ.ಶ್ರೇಣಿ,  27 ಶಾಲೆಗಳು ಸಿ.ಶ್ರೇಣಿ ಸಾಧನೆ ಮಾಡಿವೆ.

ಸರ್ಕಾರಿ ಶಾಲೆಗೆ ಶ್ರೇಯಸ್ ಪ್ರಥಮ
ಸರ್ಕಾರಿ ಶಾಲೆಗಳ ಫಲಿತಾಂಶ ಗಮನಿಸಿದಾಗ ಮುಳಬಾಗಿಲು ತಾಲೂಕಿನ ಘಟ್ಟ ಪ್ರೌಢಶಾಲೆಯ ಶ್ರೇಯಸ್ 613 ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗರಾಗಿದ್ದಾರೆ, ಹನುಮನಹಳ್ಳಿ ಪ್ರೌಢಶಾಲೆಯ ಸುಬ್ರಮಣಿ 611 ಹಾಗೂ ಮದನಹಳ್ಳಿಯ ದೀಪಕ್ 611 ಅಂಕಗಳೊಂದಿಗೆ ನಂತರದ ಸ್ಥಾನ ಪಡೆದುಕೊಂಡಿದ್ದಾರೆ.

ಶ್ರೇಣಿವಾರು ಫಲಿತಾಂಶ
ಜಿಲ್ಲೆಯ ಒಟ್ಟು ಫಲಿತಾಂಶದ ಶೇ.40 ರಷ್ಟು, ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ಗಳಿಸಿದ ಒಟ್ಟು ಅಂಕಗಳ ಶೇ.40 ರಷ್ಟು ಹಾಗೂ ಎ+ ಶ್ರೇಣಿ ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆಯ ಶೇ.20 ರಷ್ಟು ಇದನ್ನು ಕ್ರೋಢೀಕರಿಸಿ ಶ್ರೇಣಿವಾರು ಜಿಲ್ಲೆಗಳನ್ನು ವಿಭಜಿಸಿದ್ದು, ಈ ಬಾರಿ ರ್ಯಾಂಕ್ ನೀಡದೇ ಗುಣಾತ್ಮಕತೆ ಆಧಾರದ ಮೇಲೆ ವಿಭಜಿಸಲಾಗಿದೆ.

ಶೇ.75ಕ್ಕಿಂತ ಹೆಚ್ಚು ಗುಣಾತ್ಮಕತೆ ಇದ್ದರೆ ಎ ಶ್ರೇಣಿ, 75ಕ್ಕಿಂತ ಕಡಿಮೆ 60ಕ್ಕಿಂತ ಹೆಚ್ಚಿದ್ದರೆ ಬಿ ಶ್ರೇಣಿ, ಶೇ.60ಕ್ಕಿಂತ ಕಡಿಮೆ ಇರುವುದನ್ನು ಸಿ.ಶ್ರೇಣಿ ಎಂದು ವಿಭಜಿಸಲಾಗಿದೆ.

ರಚನಾಗೆ ಅಭಿನಂದನೆ; ಎಂಎಲ್‍ಸಿ ಗೋವಿಂದರಾಜುರಿಂದ ನಗದು 

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕಗಳಿಸಿ ಜಿಲ್ಲೆಗೆ ಮೊದಲಿಗಳಾಗಿರುವ ಕೆ.ರಚನಾರಿಗೆ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು 10 ಸಾವಿರ ರೂ. ನಗದು ಪುರಸ್ಕಾರ ನೀಡಿದರಲ್ಲದೇ ಜಿಲ್ಲೆಯ ಸಾಧನೆಗಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News