ಇತಿಹಾಸದಲ್ಲೇ ಪ್ರಥಮ: ಅಮೆರಿಕದ ಟೈಮ್ಸ್ ಸ್ಕ್ವೇರ್‌ನಲ್ಲಿ ಹಾರಾಡಲಿದೆ ತ್ರಿವರ್ಣ ಧ್ವಜ

Update: 2020-08-11 03:48 GMT

ನ್ಯೂಯಾರ್ಕ್, ಆ.11: ಅಮೆರಿಕದಲ್ಲಿರುವ ಭಾರತೀಯ ಮೂಲದವರ ಸಂಘಟನೆಯೊಂದು ಈ ವಾರ ಇಲ್ಲಿನ ಟೈಮ್ಸ್ ಸ್ಕ್ವೇರ್‌ನಲ್ಲಿ ಭಾರತದ ರಾಷ್ಟ್ರಧ್ವಜ ಹಾರಿಸಲಿದೆ. ನ್ಯೂಯಾರ್ಕ್ ಪಟ್ಟಣದ ಈ ಆಕರ್ಷಕ ತಾಣದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಡುವುದು ಇದೇ ಮೊದಲು.

2020ರ ಆಗಸ್ಟ್ 15ರಂದು ಭಾರತದ ಸ್ವಾತಂತ್ರ್ಯ ದಿನವನ್ನು ಸಂಭ್ರಮಿಸುವ ಸಲುವಾಗಿ ಟೈಮ್ಸ್ ಸ್ಕ್ವೇರ್‌ನಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡುವ ಮೂಲಕ ಇತಿಹಾಸ ಸೃಷ್ಟಿಸಲಿದ್ದೇವೆ ಎಂದು ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ಕನೆಕ್ಟಿಕಟ್‌ನ ಫೆಡರೇಷನ್ ಆಫ್ ಇಂಡಿಯನ್ ಅಸೋಸಿಯೇಶನ್ (ಎಫ್‌ಐಎ) ಹೇಳಿಕೆ ನೀಡಿದೆ.

ಈ ವೈಭವೋಪೇತ ತಾಣದಲ್ಲಿ ಭಾರತದ ತ್ರಿವರ್ಣ ಧ್ವಜ ಅರಳುವುದು ಇದೇ ಮೊದಲು. ನ್ಯೂಯಾರ್ಕ್‌ನಲ್ಲಿ ಭಾರತದ ಕೌನ್ಸೆಲ್ ಜನರಲ್ ರಣಧೀರ ಜೈಸ್ವಾಲ್ ಅವರು ಗೌರವ ಅತಿಥಿಗಳಾಗಿರುತ್ತಾರೆ ಎಂದು ವಿವರಿಸಿದೆ.

ಟೈಮ್ಸ್ ಸ್ಕ್ವೇರ್‌ನಲ್ಲಿ ಧ್ವಜಾರೋಹಣದ ಜತೆಗೆ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ಗೆ ಕೇಸರಿ, ಬಿಳಿ, ಹಸಿರು ಹೀಗೆ ಮೂರು ಬಣ್ಣಗಳ ದೀಪಾಲಂಕಾರ ಕೂಡಾ ಮಾಡಲು ಉದ್ದೇಶಿಸಲಾಗಿದೆ. ಕಟ್ಟಡದ ದೀಪಾಲಂಕಾರ ಆಗಸ್ಟ್ 14ರಂದು ಇರುತ್ತದೆ.

ಇದು ಭಾರತೀಯ-ಅಮೆರಿಕನ್ ಸಮುದಾಯದ ಹೆಚ್ಚುತ್ತಿರುವ ದೇಶಪ್ರೇಮದ ಸಂಕೇತವಾಗಿದ್ದು, ಸಂಘಟನೆಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಈ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟನೆ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News