ಗೃಹಪ್ರವೇಶದ ದಿನ ಮನೆಯಲ್ಲಿ ಪ್ರೀತಿಯ ಪತ್ನಿಯ ಪ್ರತಿಮೆಯನ್ನಿಟ್ಟ ಉದ್ಯಮಿ

Update: 2020-08-11 08:20 GMT

ಕೊಪ್ಪಳ, ಆ.11: ಕೊನೆಯುಸಿರೆಳೆಯುವುದಕ್ಕೂ ಮೊದಲು ಪತ್ನಿ ಇಚ್ಛಿಸಿದಂತೆ ಮನೆ ನಿರ್ಮಿಸಿದ ಉದ್ಯಮಿಯೊಬ್ಬರು ಗೃಹಪ್ರವೇಶದ ದಿನ ಮೃತ ಪತ್ನಿಯ ಪ್ರತಿಮೆಯನ್ನು ಮನೆಯಲ್ಲಿಟ್ಟಿದ್ದು, ಜೀವಂತವಿರುವಂತೆ ಕಾಣುವ ಈ ಪ್ರತಿಮೆ ಎಲ್ಲರ ಗಮನಸೆಳೆಯುತ್ತಿದೆ. ಇದು ಕೊಪ್ಪಳದ ಸಮೀಪದ ಭಾಗ್ಯ ನಗರದ ಉದ್ಯಮಿ ಶ್ರೀನಿವಾಸ್ ಗುಪ್ತಾ ಎಂಬವರು ತನ್ನ ಪತ್ನಿಯ ಕನಸಿನ ಮನೆಯಲ್ಲಿ ಅವರನ್ನು ‘ಜೀವಂತ’ವನ್ನಾಗಿಸಿದ ಕತೆ.

ಶ್ರೀನಿವಾಸ್ ಗುಪ್ತಾರ ಪತ್ನಿ ಕೆವಿಎನ್ ಮಾಧವಿ ಹೀಗೆಯೇ ಮನೆಯೊಂದನ್ನು ಕಟ್ಟಬೇಕೆಂದು ಕನಸು ಹೊಂದಿದ್ದರು. ಅದರಂತೆ ಈ ದಂಪತಿ ಮನೆ ನಿರ್ಮಾಣವನ್ನೂ ಆರಂಭಿಸಿದ್ದರು. ಈ ನಡುವೆ 2017ರ ಜುಲೈ 5ರಂದು ತಿರುಪತಿಗೆ ತೆರಳುತ್ತಿದ್ದ ವೇಳೆ ಕೋಲಾರದ ಬಳಿ ಕಾರು ಅಪಘಾತಕ್ಕೀಡಾಗಿ ಮಾಧವಿ ಸ್ಥಳದಲ್ಲೇ ಮೃತಪಟ್ಟಿದ್ದರು. ಇದರಿಂದ ತೀವ್ರ ದುಃಖತಪ್ತರಾಗಿದ್ದ ಶ್ರೀನಿವಾಸ್ ಗುಪ್ತಾ ಆ ಬಳಿಕ ಮನೆ ನಿರ್ಮಾಣ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಬಳಿಕ ಮಕ್ಕಳ ಒತ್ತಾಯದ ಮೆರೆಗೆ ಮನೆ ನಿರ್ಮಾಣವನ್ನು ಮುಂದುವರಿಸಿದರು. ಮನೆಯೂ ಸಿದ್ಧಗೊಂಡಿತ್ತು. ಆದರೆ ಪತ್ನಿಯ ಕನಸಿನ ಮನೆಯಲ್ಲಿ ಆಕೆಯೇ ಇಲ್ಲವೆಂಬ ಕೊರಗು ಶ್ರೀನಿವಾಸ್‌ರನ್ನು ಕಾಡತೊಡಗಿತು. ಹೊಸಮನೆಯಲ್ಲಿ ಪತ್ನಿಯ ನೆನಪಿಗೆ ಏನಾದರೂ ಮಾಡಬೇಕೆಂದು ಅವರು ನಿರ್ಧರಿಸಿದರು.

ಈ ವೇಳೆ ಮನೆಯ ಆರ್ಕಿಟೆಕ್ಟ್ ರಂಘಣ್ಣನವರ್ ಮೇಣದ ಪ್ರತಿಮೆ ಮಾಡಿಸಲು ಸಲಹೆ ನೀಡಿದರು. ಅದರಂತೆ ಬೆಂಗಳೂರಿನ ಶ್ರೀಧರಮೂರ್ತಿ ಎಂಬವರ ಗೊಂಬೆ ಮನೆಗೆ ಹೋದಾಗ, ಅಲ್ಲಿ ಅವರು ಮೇಣದ ಪ್ರತಿಮೆ ಬದಲಾಗಿ ಸಿಲಿಕಾನ್ ಪ್ರತಿಮೆ ಮಾಡಿಸಲು ಸಲಹೆ ನೀಡಿದರು. ಅದರಂತೆ ಶ್ರೀಧರಮೂರ್ತಿ ಸಿಲಿಕಾನ್ ಮೆಟೀರಿಯಲ್‌ನಲ್ಲಿ ಮಾಧವಿಯವರ ನೈಜರೂಪದ ಪ್ರತಿಮೆ ಸಿದ್ಧಪಡಿಸಿದರು. ಆಗಸ್ಟ್ 8ರಂದು ಶ್ರೀನಿವಾಸ್ ಅವರ ನೂತನ ಮನೆಯ ಗೃಹಪ್ರವೇಶ ನಡೆಯಿತು. ಈ ವೇಳೆ ಸೋಫಾದಲ್ಲಿ ಕುಳಿತ ಭಂಗಿಯಲ್ಲಿರುವ ಮಾಧವಿಯವರ ಸಿಲಿಕಾನ್ ಪ್ರತಿಮೆಯನ್ನು ಮನೆಯ ಹಾಲ್‌ನಲ್ಲಿ ಇಟ್ಟಿದ್ದಾರೆ. ನಗುಮುಖದ ಮಾಧವಿಯವರ ಪ್ರತಿಮೆ ಅದೆಷ್ಟು ನೈಜವಾಗಿ ಮೂಡಿಬಂದಿದೆಯೆಂದರೆ ಯಾರಾದರೂ ಮನೆಗೆ ಬಂದರೆ ಇವರನ್ನು ಮಾತನಾಡಿಸದೆ ಇರಲಾರರು.!

ಈ ಸಿಲಿಕಾನ್ ಪ್ರತಿಮೆಯನ್ನು ಮಾಡಲು ಶ್ರೀಧರ ಮೂರ್ತಿ ಒಂದು ವರ್ಷಕ್ಕೂ ಹೆಚ್ಚು ಕಾಲ ಸಮಯ ತೆಗೆದುಕೊಂಡಿದ್ದಾರೆ. ಈ ಸಿಲಿಕಾನ್ ಪ್ರತಿಮೆಗೆ ಜೀವ ಇಲ್ಲ ಎನ್ನುವುದನ್ನು ಒಂದು ಬಿಟ್ಟರೆ ಥೇಟ್ ಮಾಧವಿ ಅವರ ತರಹನೇ ಇದೆ. ಈ ಪ್ರತಿಮೆಗೆ ಮಾಧವಿ ಉಡುತ್ತಿದ್ದ ಸೀರೆಯನ್ನೇ ಉಡಿಸಲಾಗಿದ್ದು, ಅವರು ತೊಡುತ್ತಿದ್ದ ಚಿನ್ನಾಭರಣಗಳನ್ನು ಮೈಮೇಲೆ ಹಾಕಲಾಗಿದೆ. ಜೊತೆಗೆ ಅವರಂತೆಯೇ ಹೇರ್ ಸ್ಟೈಲ್ ಸಹ ಮಾಡಲಾಗಿದೆ.

ಮಾಧವಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರು ಈ ಪ್ರತಿಮೆ ಬಂದಾಗಿನಿಂದ ತಮ್ಮ ತಾಯಿ ಎಲ್ಲಿಗೂ ಹೋಗಿಲ್ಲ, ತಮ್ಮ ಜೊತೆಗೇನೆ ಇದ್ದಾರೆ ಎನ್ನುವ ಭಾವದಲ್ಲಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News