ಪ್ರಾಕೃತಿಕ ವಿಕೋಪ: ಕೊಡಗಿನಲ್ಲಿ 35,700 ಹೆಕ್ಟೇರ್ ಪ್ರದೇಶದ ಕೃಷಿ, ತೋಟಗಾರಿಕಾ ಬೆಳೆಗೆ ಹಾನಿ

Update: 2020-08-11 12:43 GMT

ಮಡಿಕೇರಿ, ಆ.11: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಸುರಿದ ಮಳೆಗೆ 3,200 ಹೆಕ್ಟೇರ್ ಕೃಷಿ ಬೆಳೆ, 32,500 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾಗೂ 304 ಮನೆಗಳಿಗೆ ಹಾನಿಯಾಗಿದೆ.

ಇದುವರೆಗಿನ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ನೀಡಿರುವ ಮಾಹಿತಿಯಂತೆ ಮಡಿಕೇರಿ ತಾಲೂಕಿನಲ್ಲಿ 64, ಸೋಮವಾರಪೇಟೆ ತಾಲೂಕಿನಲ್ಲಿ 133 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 106 ಮನೆಗಳಿಗೆ ಹಾನಿಯಾಗಿರುವುದಾಗಿ ತಿಳಿಸಿದೆ.

ಮೂಲಭೂತ ಸೌಲಭ್ಯಗಳ ಹಾನಿಯ ವಿವರದನ್ವಯ 35.80 ಕಿ.ಮೀ. ರಾಜ್ಯ ಹೆದ್ದಾರಿ, 26.78 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆ, 260.37ಕಿ.ಮೀ. ಗ್ರಾಮೀಣ ರಸ್ತೆ, 47 ಕಿ.ಮೀ. ನಗರ ಪ್ರದೇಶದ ರಸ್ತೆಗೆ ಹಾನಿಯಾಗಿರುವುದಾಗಿ ಹೇಳಲಾಗಿದೆ.  

ಜಿಲ್ಲೆಯಲ್ಲಿ 20 ಸೇತುವೆ ಮತ್ತು ಕಲ್ವರ್ಟ್ ಗಳು, 2012 ವಿದ್ಯುತ್ ಕಂಬಗಳು, 25,650 ಕಿ.ಮೀ. ವಿದ್ಯುತ್ ಪೂರೈಕೆ ಲೈನ್, 75 ಟ್ರಾನ್ಸ್ ಫಾರ್ಮರ್ ಗಳು, 74 ಶಾಲಾ ಕಟ್ಟಡಗಳು, 13 ಅಂಗನವಾಡಿಗಳು, ಒಂದು ಸಮುದಾಯ ಭವನ, 32 ಸಣ್ಣ ನೀರಾವರಿ  ಕೆರೆಗಳು, 48 ನೀರು ಪೂರೈಕೆ ಮತ್ತು ನೈರ್ಮಲ್ಯ ರಚನೆಗಳು, 18 ತಡೆಗೋಡೆಗಳು, ಒಂದು ಸರಕಾರಿ ಕಟ್ಟಡ ನಷ್ಟವಾಗಿರುವುದಾಗಿ ವರದಿಯಾಗಿದೆ.

ಜಿಲ್ಲೆಯಲ್ಲಿ ಮಡಿಕೇರಿ ತಾಲೂಕಿನಲ್ಲಿ 22 ವೀರಾಜಪೇಟೆ ತಾಲೂಕಿನ 14 ಹಾಗೂ ಸೋಮವಾರಪೇಟೆ ತಾಲೂಕಿನ 24 ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮಡಿಕೇರಿ ತಾಲೂಕಿನ ಬ್ರಹ್ಮಗಿರಿ (ತಲಕಾವೇರಿ), ಕೋರಂಗಾಲ, ಬೊಟ್ಲಪ್ಪ ಪೈಸಾರಿ(ಕಡಗದಾಳು), ಜೋಡುಪಾಲ, ನೀರುಕೊಲ್ಲಿ, 2ನೇ ಮೊಣ್ಣಂಗೇರಿ, ಕೊಯನಾಡು, ಪೆರಾಜೆ, ಮಡಿಕೇರಿಯ ದೇಚೂರು, ಸೋಮವಾರಪೇಟೆ ತಾಲೂಕಿನ ಪೊನ್ನತ್‍ಮೊಟ್ಟೆ, ಚೆಟ್ಟಳ್ಳಿ-ಮಡಿಕೇರಿ ರಸ್ತೆ (ಅಬ್ಯಾಲ) ವೀರಾಜಪೇಟೆ ತಾಲೂಕು ಮಗ್ಗುಲ(ಅಯ್ಯಪ್ಪಬೆಟ್ಟ) ಸೇರಿದಂತೆ 12 ಕಡೆಗಳಲ್ಲಿ ಭೂ ಕುಸಿತ ಉಂಟಾಗಿರುವುದಾಗಿ ಹೇಳಲಾಗಿದೆ.

ಸಂತ್ರಸ್ತರ ಸಂರಕ್ಷಣೆ: ಜಿಲ್ಲೆಯಲ್ಲಿ ಈವರೆಗೆ ನಾಪೋಕ್ಲು ಹಾಗೂ ಹೊದವಾಡದಲ್ಲಿ ತಲಾ 13, ನೆಲ್ಲಿಹುದಿಕೇರಿಯಲ್ಲಿ 96, ಕಡಗದಾಳುವಿನಲ್ಲಿ 150, ಬಲಮುರಿಯಲ್ಲಿ 7 ಕೊಟ್ಟಮುಡಿಯಲ್ಲಿ 29, ಚೆರಿಯಪರಂಬುವಿನಲ್ಲಿ 7, ವಾಲ್ನೂರು ತ್ಯಾಗತ್ತೂರು ಬಾಳೆಗುಂಡಿಯಲ್ಲಿ 6, ನಲ್ವತ್ತೆಕರೆಯ 12, ಬೆಟ್ಟಗೇರಿಯಲ್ಲಿ 8 ಕಡಗದಾಳು ಬೊಟ್ಲಪ್ಪ ಪೈಸಾರಿಯಲ್ಲಿ 51, ಕೈಮಾಡುವಿನಲ್ಲಿ 5, ನೀರುಕೊಲ್ಲಿಯಲ್ಲಿ 43, ಮೈತಾಡಿಯಲ್ಲಿ 40, ಕೊಂಡಂಗೇರಿ ಹಾಗೂ ಸಿದ್ದಾಪುರದ ಕುರುಬರಗುಂಡಿಯಲ್ಲಿ ತಲಾ 8, ತಣ್ಣಿಮಾನಿಯಲ್ಲಿ 50, ಬೆಟ್ಟದಕಾಡುವಿನಲ್ಲಿ 10, ಅತ್ತೂರು ನಲ್ಲೂರು ಕೊಟ್ಟಗೇರಿ ಪೈಸಾರಿಯಲ್ಲಿ 10 ಬಾಳೆಯಲ್ಲಿ 2 ಚಾಮಿಯಾಲದಲಿ 17 ಮಂದಿ ಸೇರಿದಂತೆ 585 ಮಂದಿಯನ್ನು ಪೊಲೀಸ್, ಕ್ಷಿಪ್ರ ಕಾರ್ಯಾರಣೆ ತಂಡ, ಎನ್‍ಡಿಆರ್‍ಎಫ್ ತಂಡಗಳು ರಕ್ಷಿಸಿವೆ.

ಪರಿಹಾರ ಕೇಂದ್ರಗಳು: ಜಿಲ್ಲೆಯ ಭಾಗಮಂಡಲದ ಕಾಶಿಮಠದಲ್ಲಿ 50 ಕುಟುಂಬಗಳ 102, ಕೆವಿಜಿ ಕಾಲೇಜಿನಲ್ಲಿ 39 ಕುಟುಂಬಗಳ 95 ಮಂದಿ, ಕಡಗದಾಳು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ 15 ಕುಟುಂಬಗಳ 35 ಮಂದಿ ಸೇರಿದಂತೆ 104 ಕುಟುಂಬಗಳ 232 ಮಂದಿಗೆ ಮಡಿಕೇರಿ ತಾಲೂಕಿನಲ್ಲಿ ಆಶ್ರಯ ಕಲ್ಪಿಸಲಾಗಿದೆ.

ವೀರಾಜಪೇಟೆ ತಾಲೂಕಿನ ಕರಡಿಗೋಡು ಪ್ರಾಥಮಿಕ ಶಾಲೆಯಲ್ಲಿ 21 ಕುಟುಂಬಗಳ 41, ಕೊಂಡಂಗೇರಿ ಸರಕಾರಿ ಪ್ರೌಢಶಾಲೆಯಲ್ಲಿ 8 ಕುಟುಂಬಗಳ 27, ಕರಡಿಗೋಡು ಬಸವೇಶ್ವರ ಸಮುದಾಯ ಭವನದಲ್ಲಿ 19 ಕುಟುಂಬಗಳ 36, ಹುದಿಕೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 36 ಕುಟುಂಬಗಳ 112, ಬಲ್ಯಮಂಡೂರು ಶಾಲೆಯಲ್ಲಿ 5 ಕುಟುಂಬಗ 16, ವೀರಾಜಪೇಟೆ ಚಿಕ್ಕಪೇಟೆ ಸರಕಾರಿ ಶಾಲೆಯಲ್ಲಿ 24 ಕುಟುಂಬಗಳ 42 ಮಂದಿ ಸಏರಿದಂತೆ ಒಟ್ಟು 6 ಪರಿಹಾರ ಕೇಂದ್ರಗಳಲ್ಲಿ 113 ಕುಟುಂಬಗಳ 274 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಬರೆ ಜರಿದಿರುವುದರಿಂದ ಮತ್ತು ಮರ ಬಿದ್ದಿರುವುದರಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ತುರ್ತಾಗಿ ಕ್ರಮ ವಹಿಸಬಹುದಾದ ಕಡೆಗಳಲ್ಲಿ ಸಂಬಂಧಪಟ್ಟ ಇಲಾಖೆಗಳಿಂದ ತುರ್ತು ಕ್ರಮ ವಹಿಸಿ ರಸ್ತೆಗಳನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. 
ಅತಿವೃಷ್ಟಿಯಿಂದ ಆಗಬಹುದಾದ ತೊಂದರೆಗಳನ್ನು ಎದುರಿಸಲು ಜಿಲ್ಲಾಡಳಿತವು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯಾದ್ಯಂತ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಯಾವುದೇ ತುರ್ತು ಸಂದರ್ಭಗಳನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು  ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆ ತಾಲೂಕಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ಮೊಕ್ಕಾಂ ಹೂಡಿದ್ದು, ತುರ್ತು ಸಂದರ್ಭದಲ್ಲಿ ನೆರವಿಗೆ ಬರಲಿವೆ. ಅಲ್ಲದೆ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಲ್ಲಿ 24*7 ನಿಯಂತ್ರಣಾ ಕೊಠಡಿಗಳು ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಾಟ್ಸ್ ಆಪ್‍ನಲ್ಲಿ ಸಹ ಪ್ರಕೃತಿ ವಿಕೋಪ ಸಂಬಂಧಿತ ದೂರುಗಳನ್ನು ಸ್ವೀಕರಿಸಿ ತುರ್ತು ಕ್ರಮ ವಹಿಸಲಾಗುತ್ತಿದೆ.

ಪ್ರಕೃತಿ ವಿಕೋಪ ಸಂಬಂಧಿತ ಹಾನಿಯ ಬಗ್ಗೆ ವಿವರ ಮತ್ತು ನೆರವು ಕೋರಲು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಂಟ್ರೋಲ್ ಕೊಠಡಿ ಸಂ:08272-221077 ಮತ್ತು ವಾಟ್ಸಪ್ ನಂ.8550001077ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News