ಚಿಕ್ಕಮಗಳೂರು: ಕ್ಷೀಣಿಸಿದ ಮಳೆಯ ಆರ್ಭಟ; ಜನಜೀವನ ಸಹಜ ಸ್ಥಿತಿಯತ್ತ

Update: 2020-08-11 13:11 GMT
ಫೈಲ್ ಚಿತ್ರ

ಚಿಕ್ಕಮಗಳೂರು, ಆ.11: ಕಾಫಿನಾಡಿನಲ್ಲಿ ಕಳೆದೊಂದು ವಾರ ಅಬ್ಬರಿಸಿದ ಮಳೆ ಇದೀಗ ಶಾಂತವಾಗಿದ್ದು, ಮಲೆನಾಡಿನಲ್ಲಿ ಜನಜೀವನ ಸಹಜಸ್ಥಿತಿಯತ್ತ ಮರುಳುತ್ತಿದೆ. ಕಳೆದ ರವಿವಾರದಿಂದ ಜಿಲ್ಲಾದ್ಯಂತ ಮೋಡಕವಿದ ವಾತಾವರಣ ಇದ್ದು, ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದ್ದರೆ, ಬಯಲು ಭಾಗದಲ್ಲಿ ಆಗಾಗ್ಗೆ ತುಂತುರು ಮಳೆಯಾಗುತ್ತಿದೆ.

ಜಿಲ್ಲೆಯಲ್ಲಿ ಕಳೆದ ಒಂದು ವಾರ ಧಾರಾಕಾರ ಮಳೆಯಾಗಿದ್ದು, ನಿರಂತರವಾಗಿ ಸುರಿದ ಧಾರಾಕಾರ ಮಳೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಪ್ರಾಕೃತಿಕ ವಿಕೋಪಗಳಿಗೆ ಕಾರಣವಾಗಿತ್ತು. ಮಲೆನಾಡಿನ ಪ್ರಮುಖ ನದಿಗಳಾದ ಹೇಮಾವತಿ, ತುಂಗಾ, ಭದ್ರಾ ನದಿಗಳು ಅಪಾಯದ ಮಟ್ಟದಲ್ಲಿ ಹರಿದ ಪರಿಣಾಮ ನದಿ ಪಾತ್ರದ ಹೊಲ, ಗದ್ದೆ, ತೋಟಗಳು ಜಲಾವೃತಗೊಂಡಿದ್ದವು. ಮಲೆನಾಡು ಭಾಗದಲ್ಲಿ ಕೆಲ ಪ್ರಮುಖ ರಸ್ತೆ ಮಾರ್ಗಗಳು ಬಂದ್ ಆಗಿದ್ದು, ನೂರಕ್ಕೂ ಹೆಚ್ಚು ಮನೆಗಳು ಜಖಂಗೊಂಡಿದ್ದವು. ಅಲ್ಲದೇ ಮಳೆ ಸೃಷ್ಟಿಸಿದ ಅವಾಂತರಗಳಿಂದಾಗಿ ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಐವರು ಮೃತಪಟ್ಟಿದ್ದರು. ಚಾರ್ಮಾಡಿ ಮಾರ್ಗವಾಗಿ ಚಿಕ್ಕಮಗಳೂರು-ಮಂಗಳೂರು ಸಂಪರ್ಕದ ಹೆದ್ದಾರಿ ಒಂದು ವಾರದ ಕಾಲ ಬಂದ್ ಮಾಡಲಾಗಿತ್ತು.

ಇದೀಗ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಕಡಿಮೆಯಾಗಿದ್ದು, ಮಲೆನಾಡು ಭಾಗದ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕು ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗುತ್ತಿದ್ದರೆ, ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ಆಗಾಗ್ಗೆ ತುಂತು ಮಳೆಯಾಗುತ್ತಿದೆ. ಸೋಮವಾರ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ಇತ್ತಾದರೂ ಎಲ್ಲೂ ಭಾರೀ ಮಳೆಯಾದ ಬಗ್ಗೆ ವರದಿಯಾಗಿಲ್ಲ. ಮಳೆಯ ಆರ್ಭಟ ಕಡಿಮೆಯಾಗಿರುವುದರಿಂದ ಜಿಲ್ಲಾದ್ಯಂತ ಜನಜೀವನ ಸಹಜಸ್ಥಿತಿಯ ಮರುಳುತ್ತಿದೆ.

ಬಾಳೆಹೊನ್ನೂರು, ಕೊಪ್ಪ, ನರಸಿಂಹರಾಜಪುರ, ಮೂಡಿಗೆರೆ ವ್ಯಾಪ್ತಿಯಲ್ಲಿ ಹರಿಯುವು ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಜಲಾವೃತಗೊಂಡಿದ್ದ ಹೊಲ, ಗದ್ದೆ, ಕಾಫಿ, ಅಡಿಕೆ ತೋಟಗಳಲ್ಲಿ ನೀರು ಇಳಿಕೆಯಾಗಿದೆ. ಜಿಲ್ಲಾಡಳಿತ ಹದಗೆಟ್ಟ ರಸ್ತೆ, ಸೇತುವೆಗಳ ದುರಸ್ತಿಗೆ ಮುಂದಾಗಿದ್ದು, ಜಖಂಗೊಂಡಿದ್ದ ಮನೆಗಳ ಮಾಹಿತಿ ಸಂಗ್ರಹಿಸಿ ಪರಿಹಾರ ವಿತರಣೆಗೆ ಕ್ರಮವಹಿಸಿದೆ. ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅಧಿಕಾರಿಗಳೊಂದಿಗೆ ಮಳೆಯಿಂದ ಹಾನಿಗೀಡಾದ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ. ಒಟ್ಟಾರೆ ಜಿಲ್ಲಾದ್ಯಂತ ಕಳೆದೊಂದು ವಾರದಿಂದ ಆರ್ಭಟಿಸಿ ಮಲೆನಾಡಿಗರ ನಿದ್ದೆಗೆಡಿಸಿದ್ದ ಮಳೆಯ ಆರ್ಭಟ ಒಂದೇ ವಾರಕ್ಕೆ ನಿಂತಿರುವುದರಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ.

ಚಾರ್ಮಾಡಿ ಘಾಟ್ ಸಂಚಾರಕ್ಕೆ ಮುಕ್ತ
ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಕಳೆದೊಂದು ವಾರ ಭಾರೀ ಮಳೆಯಾದ ಪರಿಣಾಮ ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಭಾರೀ ಭೂ ಕುಸಿತದೊಂದಿಗೆ ಮರಗಳು, ಕಲ್ಲುಬಂಡೆಗಳು ರಸ್ತೆಗುರುಳಿದ್ದ ಪರಿಣಾಮ ಆ.5ರಿಂದ ಆ.11ರವರೆಗೆ ಈ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಜಿಲ್ಲಾಡಳಿತ ನಿಷೇದಿಸಿತ್ತು. ಇದೀಗ ಮಳೆ ಕಡಿಮೆಯಾಗಿರುವುದಲ್ಲದೇ ರಸ್ತೆ ಮೇಲಿದ್ದ ಮಣ್ಣ, ಕಲ್ಲು, ಮರಗಳನ್ನು ತೆರವು ಮಾಡಿ ಹದಗೆಟ್ಟಿದ್ದ ರಸ್ತೆಯನ್ನು ದುರಸ್ತಿ ಮಾಡಲಾಗಿದೆ. ಪರಿಣಾಮ ಹೆದ್ದಾರಿಯಲ್ಲಿ ವಾಹನ ಸಂಚಾರ ಪುನಾರಂಭಕ್ಕೆ ಜಿಲ್ಲಾಡಳಿತ ಹಸಿರು ನಿಶಾನೆ ತೋರಿದ್ದು, ಆ.12ರಿಂದ ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಲಘು ವಾಹನಗಳ ಸಂಚಾರ ಆರಂಭವಾಗಲಿದೆ. ಈ ರಸ್ತೆಯಲ್ಲಿ ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಮಾತ್ರ ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ, ಭಾರೀ ವಾಹನಗಳ ಸಂಚಾರಕ್ಕೆ ನಿಷೇಧವನ್ನು ಮುಂದುವರಿಸಿದೆ.

ಭಾರೀ ಮಳೆಗೆ ಐವರು ಬಲಿ: ಜಿಲ್ಲೆಯಾದ್ಯಂತ ಕಳೆದೊಂದು ವಾರ ಸುರಿದ ಭಾರೀ ಮಳೆಯಿಂದಾಗಿ ಕಾಫಿನಾಡಿನಲ್ಲಿ ಐವರು ಬಲಿಯಾಗಿದ್ದಾರೆ. ಮೂಡಿಗೆರೆ ತಾಲೂಕಿನಲ್ಲಿ ಇಬ್ಬರು ವೃದ್ಧೆಯರು ನದಿಗಳ ನೆರೆ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದರೆ, ಶೃಂಗೇರಿ ತಾಲೂಕಿನ ನೆಮ್ಮಾರ್ ಗ್ರಾಪಂ ವ್ಯಾಪ್ತಿಯಲ್ಲಿ ರೈತರೊಬ್ಬರು ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಕಡೂರು ತಾಲೂಕಿನಲ್ಲಿ ಮಳೆ ಗಾಳಿಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮೃತಪಟ್ಟಿದ್ದರೆ, ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರೂ ಭದ್ರಾ ನರೆ ನೀರಿಗೆ ಬಿದ್ದು ಮೃತರಾಗಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಈ ಭಾರೀ ಮಳೆ ಸೃಷ್ಟಿಸಿದ ಮಳೆ ಐವರನ್ನು ಬಲಿ ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News