ಜಗತ್ತು ಶೀಘ್ರ ಕೊರೋನ ಮುಕ್ತವಾಗಲಿ: ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಿಎಂ ಸೇರಿ ಗಣ್ಯರ ಶುಭ ಹಾರೈಕೆ

Update: 2020-08-11 16:08 GMT

ಬೆಂಗಳೂರು, ಆ. 11: `ಶ್ರೀ ಕೃಷ್ಣಾ ಜನ್ಮಾಷ್ಟಮಿ ನಾಡಿನ ಸಮಸ್ತ ಜನತೆಗೆ ಶುಭವನ್ನು ತರಲಿ. ಅದಷ್ಟು ಶೀಘ್ರವೇ ಕೊರೋನ ವೈರಸ್ ಸೋಂಕಿನಿಂದ ಕರ್ನಾಟಕ ರಾಜ್ಯ ಮುಕ್ತವಾಗಲಿ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಹಲವು ಗಣ್ಯರು ನಾಡಿನ ಜನತೆಗೆ ಕೃಷ್ಣಾ ಜನ್ಮಾಷ್ಟಮಿ ಶುಭ ಕೋರಿದ್ದಾರೆ.

`ನಾಡಿನ ಸಮಸ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು, ಭಗವಂತ ಶ್ರೀಕೃಷ್ಣ ಜಗತ್ತಿಗೆ ಎದುರಾಗಿರುವ ಎಲ್ಲ ಸಂಕಷ್ಟಗಳನ್ನು ಪರಿಹರಿಸಲಿ, ಎಲ್ಲರಿಗೂ ಸುಖ, ಆರೋಗ್ಯ, ನೆಮ್ಮದಿಯನ್ನು ಕರುಣಿಸಲಿ' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವಿಟ್ಟರ್ ಮೂಲಕ ಪ್ರಾರ್ಥಿಸಿದ್ದಾರೆ.

`ಜಗತ್ತನ್ನು ಕಾಡುತ್ತಿರುವ ಮಹಾ ಕಂಟಕ ಕೊರೋನ ಮತ್ತು ರಾಷ್ಟ್ರದ ಅನೇಕ ಭಾಗಗಳಲ್ಲಿ ಹಾಗೂ ರಾಜ್ಯದಲ್ಲಿ ಅನುಭವಿಸುತ್ತಿರುವ ನೆರೆ ಹಾವಳಿಯಿಂದ ಸಮಸ್ತ ಜನತೆಯ ಸಂಕಷ್ಟವನ್ನು ಶ್ರೀಕೃಷ್ಣ ಪರಮಾತ್ಮನು ದೂರ ಮಾಡಲಿ. ಶ್ರೀಕೃಷ್ಣ ವಿಷ್ಣುವಿನ ಎಂಟನೆ ಅವತಾರ, ಮಥುರಾವನ್ನು ಕಂಸನಿಂದ ರಕ್ಷಿಸುವ ಸಲುವಾಗಿಯೇ ದೇವಕಿಸುತನ ಜನನವಾಯಿತು. ಪಾಂಡವ, ಕೌರವರ ನಡುವಣ ಕುರುಕ್ಷೇತ್ರ ಯುದ್ದದ ಸಂದರ್ಭದಲ್ಲೂ ಪಾಂಡವರ ಜಯದಲ್ಲಿ ಕೃಷ್ಣನ ಪಾತ್ರ ಹಿರಿದು, ಹೀಗೆ ಕೃಷ್ಣನ ಚರಿತ್ರಾರ್ಮೃತವೇ ಅದ್ಭುತ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬಣ್ಣಿಸಿದ್ದಾರೆ.

`ಪವಿತ್ರ ಗೋಕುಲಾಷ್ಟಮಿಯು, ನಾಡಿಗೆ ಬಂದೊದಗಿರುವ ಕೊರೋನ ವೈರಸ್ ಸೋಂಕು ಮತ್ತು ಅತಿವೃಷ್ಟಿ ವಿರುದ್ಧ ಹೋರಾಡಲು ಧನಾತ್ಮಕ ಶಕ್ತಿಯನ್ನು ನೀಡಲಿ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ನಾಡಿನ ಜನತೆಗೆ ಟ್ವಿಟ್ಟರ್ ಮೂಲಕ ಶುಭ ಕೋರಿದ್ದಾರೆ.

ರಾಜಕೀಯ ಚಾಣಾಕ್ಷ ಕೃಷ್ಣ ಇಷ್ಟ

`ನನಗೆ ಬಾಲ ಕೃಷ್ಣ, ದೇವಕಿ-ದ್ರೌಪದಿಯ ಕೃಷ್ಣ, ಕುಚೇಲನ ಕೃಷ್ಣ ಮತ್ತು ರಾಜಕೀಯ ಚಾಣಾಕ್ಷ್ಯ ಕೃಷ್ಣ ಇಷ್ಟ. ಇಂದು ಕೃಷ್ಣಾಷ್ಟಮಿ. ಜಗತ್ತು ಶೀಘ್ರ ಕೊರೋನ ಮುಕ್ತವಾಗಲಿ, ಜನರ ಕಷ್ಟದ ದಿನಗಳು ದೂರವಾಗಿ ಸುಖ ಸಮೃದ್ಧಿ ಸಮಾಜದಲ್ಲಿ ನೆಲೆಸಲಿ'

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News