ಆ.14ರ ಮಧ್ಯರಾತ್ರಿ 12 ಗಂಟೆಗೆ ತಮಟೆ ಚಳವಳಿ: ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ

Update: 2020-08-11 16:12 GMT

ಮೈಸೂರು,ಆ.11: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಆಗಸ್ಟ್ 14ರ ಮಧ್ಯರಾತ್ರಿ 12 ಗಂಟೆಗೆ ತಮಟೆ ಚಳುವಳಿ ಮತ್ತು ಪಂಜಿನ ಮೆರವಣಿಗೆ ಮಾಡಲಾಗುತ್ತದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಈ ಸಂಬಂಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದಿಂದ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾಹಿತಿ ನೀಡಿದರು.

ರಾಜ್ಯ ಸರ್ಕಾರದ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು. ಈಗಾಗಲೇ ಆಗಸ್ಟ್ 8 ರಂದು ಭೂಮಿ ಮಾರಾಟಕ್ಕಿಲ್ಲ ಎಂದು ಶಪಥ ಮಾಡಿ ನಮ್ಮ ಭೂಮಿ ನಮ್ಮ ಹಕ್ಕು ಅನ್ಯರಿಗೆ ಮಾರಾಟವಿಲ್ಲ ಎಂಬ ನಾಮಫಲಕಗಳನ್ನು ಊರಿನ ಮುಂದೆ ಹಾಕುವ ಮೂಲಕ ನಮ್ಮೂರಿಗೆ ಬರಬೇಡಿ ತೊಲಗಿ ಎಂದು ಹೇಳುವ ಕಾರ್ಯಕ್ರಮ ಆರಂಭವಾಗಿದೆ. ಇದರ ಮುಂದುವರಿದ ಭಾಗವಾಗಿ ಆಗಸ್ಟ್ 14 ರ ಮಧ್ಯರಾತ್ರಿ12 ಗಂಟೆಗೆ ಬೆಂಗಳೂರಿನಲ್ಲಿ ತಮಟೆ ಚಳುವಳಿ ಮತ್ತು ಪಂಜಿನ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು.

ಇನ್ನು ಆಗಸ್ಟ್ 29 ರಂದು ಜನ ಜಾಗೃತಿಗಾಗಿ ವಿಚಾರ ಸಂಕಿರಣ ನಡೆಸಲಾಗುವುದು. ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಜನ ಸಂಪರ್ಕ ಸಭೆಗಳನ್ನು ಏರ್ಪಡಿಸಿ ಚಳವಳಿಯನ್ನು ತೀವ್ರಗೊಳಿಸಲಾಗುವುದು ಎಂದು ಬಡಗಲಪುರ ನಾಗೇಂದ್ರ ಹೇಳಿದರು.

ಇದೇ ವೇಳೆ ಮಾತನಾಡಿದ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ರಾಜ್ಯ ಸರ್ಕಾರದ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಿರುವುದು ಸಂಪೂರ್ಣ ಜನವಿರೋಧಿಯಾಗಿದೆ. ಇದರ ವಿರುದ್ಧ ಸಂಘಟಿತ ಹೋರಾಟ ಮಾಡಲಾಗುವುದು. ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು. ಜನ ವಿರೋಧಿ ಕಾಯ್ದೆಗಳನ್ನು ತಂದು ಬಡವರನ್ನ ತುಳಿಯವ ಕೆಲಸವನ್ನ ಈ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಚಾಮರಸಪಾಟೀಲ್, ರವಿಕಿರಣ್ ಪೂಣಚ್ಚ, ದಸಂಸ ಮುಖಂಡರುಗಳಾದ ಮಾವಳ್ಳಿ ಶಂಕರ್, ಲಕ್ಷ್ಮಿನಾರಾಯಣ ನಾಗವಾರ, ಗುರುಪ್ರಸಾದ್ ಕೆರಗೋಡು, ರಾಮಸ್ವಾಮಿ, ವಿ.ನಾಗರಾಜ್ ಸೇರಿದಂತೆ ರೈತ ಮುಖಂಡರು, ವಿವಿಧ ದಲಿತ ಸಂಘಟನೆಗಳ ಪ್ರಮುಖ ನಾಯಕರು ಉಪಸ್ಥಿತರಿದ್ದರು.

ರಾಜ್ಯ ಸರ್ಕಾರದ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಿರುವುದು ಸಂಪೂರ್ಣ ಜನವಿರೋಧಿಯಾಗಿದೆ. ಇದರ ವಿರುದ್ಧ ಸಂಘಟಿತ ಹೋರಾಟ ಮಾಡಲಾಗುವುದು. ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು. ಜನ ವಿರೋಧಿ ಕಾಯ್ದೆಗಳನ್ನು ತಂದು ಬಡವರನ್ನ ತುಳಿಯವ ಕೆಲಸವನ್ನ ಈ ಸರ್ಕಾರ ಮಾಡುತ್ತಿದೆ.
-ಗುರುಪ್ರಸಾದ್ ಕೆರಗೋಡು, ದಸಂಸ ರಾಜ್ಯ ಸಂಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News