ಬಂಡವಾಳಶಾಹಿ ಮತ್ತು ಅಗರ್ಭ ಶ್ರೀಮಂತರನ್ನು ಓಲೈಸುವುದರಲ್ಲಿ ಸರಕಾರ ತಲ್ಲೀನ: ಎಫ್‍ಐಟಿಯು

Update: 2020-08-11 17:25 GMT

ಬೆಂಗಳೂರು, ಆ.11: ಕೋವಿಡ್-19 ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೈತರ, ಬಡವರ ಹಾಗೂ ಕಾರ್ಮಿಕರ ಹಿತ ಕಾಯುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಫೆಡರೇಶನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಎಫ್‍ಐಟಿಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಕಲ್ಲರ್ಪೆ ಆರೋಪಿಸಿದರು.

ನರೇಂದ್ರ ಮೋದಿ ಸರಕಾರವು ಆಡಳಿತಕ್ಕೆ ಬಂದಾಗಿನಿಂದ ಕಾರ್ಪೋರೇಟ್‍ಗಳಿಗೆ ಸ್ವರ್ಗ ಸುಖ ಸಿಕ್ಕಿದಂತಾಗಿದೆ. ಎಲ್ಲಾ ಯೋಜನೆಗಳನ್ನು ಬಂಡವಾಳಶಾಹಿಗಳಿಗೆ ಕೊಟ್ಟಿದ್ದಾರೆ. ಇದಕ್ಕೊಂದು ಉದಾಹರಣೆ ವಿಮಾನ ನಿರ್ಮಾಣದಲ್ಲಿ 70 ವರ್ಷಗಳ ಅನುಭವವಿರುವ ಎಚ್‍ಎಎಲ್ ಅನ್ನು ಕಡೆಗಣಿಸಿ ಯಾವುದೇ ಅನುಭವವಿಲ್ಲದ ರಿಲಾಯನ್ಸ್ ಕಂಪೆನಿಗೆ ರಫೇಲ್ ವಿಮಾನದ ಕರಾರನ್ನು ಒಪ್ಪಿಸಿರುವುದನ್ನು ನೋಡಿದರೆ ಸ್ಪಷ್ಟವಾಗುತ್ತದೆ ಇವರ ಉದ್ದೇಶ ಎಂದು ಅವರು ಆರೋಪಿಸಿದ್ದಾರೆ.

ಕೇವಲ ಬಂಡವಾಳಶಾಹಿಗಳನ್ನು ಮತ್ತು ಶ್ರೀಮಂತರನ್ನು ಓಲೈಸುವುದರಲ್ಲೇ ಸರಕಾರವು ತಲ್ಲೀನವಾಗಿದೆ. ದೇಶವು ಮೊದಲೇ ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿತ್ತು. ಜಿಡಿಪಿ ದರವು ಪಾತಾಳಕ್ಕೆ ಕುಸಿದಿತ್ತು. ಈ ಸಂದರ್ಭದಲ್ಲಿ ಕೊರೋನ ಇವರಿಗೆ ವರದಾನದ ರೂಪದಲ್ಲಿ ಸಿಕ್ಕಿದಂತಾಗಿದೆ ಎಂದು ಅವರು ಹೇಳಿದ್ದಾರೆ.

ಕೊರೋನದ ಮರೆಯಲ್ಲಿ ಸರಕಾರವು ಬೇಕಾಬಿಟ್ಟಿ ಲೂಟಿ ಮಾಡುತ್ತಿದೆ. ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪಾತಾಳಕ್ಕಿಳಿದಿದೆಯಾದರೂ ಇಲ್ಲಿ ದಿನದಿಂದ ದಿನಕ್ಕೆ ತೈಲಬೆಲೆಯನ್ನು ಏರಿಸುತ್ತಲೇ ಇದ್ದಾರೆ.  ಕೊರೋನ ಸೋಂಕನ್ನು ತಡೆಗಟ್ಟಲು ಜಾರಿಗೊಳಿಸಿದ ಅವೈಜ್ಞಾನಿಕ ಲಾಕ್‍ಡೌನ್‍ನಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂದು ಸುಲೈಮಾನ್ ತಿಳಿಸಿದ್ದಾರೆ.

ಇದರಿಂದ ಕೃಷಿಕರ, ರೈತರ, ಕಾರ್ಮಿಕರ, ಬಡ ಕೂಲಿಕಾರರ, ಬದುಕು ಬರ್ಬರವಾಗಿದೆ ಮಾತ್ರವಲ್ಲ ಸಾವಿರಾರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಕಾರಗಳು ಬಡ ಜನರ ಬದುಕು ಸುಧಾರಿಸುವ ಪ್ರಯತ್ನ ಮಾಡುತ್ತಿಲ್ಲ. ಬದಲಿಗೆ ಬಂಡವಾಳಶಾಹಿಗಳು ಹಾಗೂ ಕಾರ್ಪೋರೇಟ್ ಕಂಪನಿಗಳಿಗೆ ಸಾರ್ವಜನಿಕರ ಸಂಪನ್ಮೂಲಗಳ ನೆರವಿನ ಮೊತ್ತವನ್ನು ನೀಡುತ್ತಿದೆ ಎಂದು ಅವರು ದೂರಿದ್ದಾರೆ.

ಈ ಸರಕಾರ ಶ್ರೀಮಂತರ ಪರವಿರುವ ಸರಕಾರವಾಗಿದೆ. ಕೇವಲ ಕಾರ್ಪೋರೇಟ್‍ಗಳನ್ನು ಮತ್ತು ಅಗರ್ಭ ಶ್ರೀಮಂತರನ್ನು ಕೆಂಪು ಹಾಸು ಹಾಕಿ ಓಲೈಸುವ ಕೆಲಸ ಮಾಡುತ್ತಿದೆ. ಅಲ್ಲದೆ ಕೊವಿಡ್-19ನ್ನು ಬಳಸಿಕೊಂಡು ತೆರೆಮರೆಯಲ್ಲಿ ಸುಗ್ರೀವಾಜ್ಞೆ ಮೂಲಕ ಜನವಿರೋಧಿ ಕಾನೂನು ಜಾರಿಗೊಳಿಸುತ್ತಿದೆ ಎಂದು ಸುಲೈಮಾನ್ ಆರೋಪಿಸಿದ್ದಾರೆ.

'ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರಧನ ಬಿಡುಗಡೆಯಾಗಿಲ್ಲ. ಕೃಷಿ ಉತ್ಪನ್ನಗಳ ಬೆಲೆ ಕುಸಿದಿರುವುದರಿಂದ ರೈತರು ಬವಣೆ ಪಡುವಂತಾಗಿದೆ. ವೃದ್ಧಾಪ್ಯ ಮತ್ತು ವಿಧವಾ ವೇತನ, ಅಂಗವಿಕಲರ ಮಾಶಾಸನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಹಣ ಫಲಾನುಭವಿಗಳ ಕೈ ಸೇರಿಲ್ಲ' ಎಂದು ಅವರು ಆರೋಪಿಸಿದ್ದಾರೆ.

'ಸರಕಾರವು ರೈತರನ್ನು ಲೂಟಿ ಮಾಡಲು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಕೊರೋನ ಕಾರಣಕ್ಕೆ ಕೇಂದ್ರ ಘೋಷಿಸಿರುವ 20 ಲಕ್ಷ ಕೋಟಿ ರೂ.ಮೊತ್ತದ ಪ್ಯಾಕೇಜ್ ದೊಡ್ಡ ಸುಳ್ಳಿನ ಕಂತೆ. ಸುಳ್ಳನ್ನೇ ಬಂಡವಾಳ ಮಾಡಿಕೊಂಡು ಈ ಸರಕಾರ ದಿನ ದೂಡುತ್ತಿದೆ. ಜನರ ತಲಾ ಆದಾಯ ಹೆಚ್ಚಿಸುವ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ದೇಶವನ್ನು ಪಾರು ಮಾಡುವ ಯೋಜನೆ ಜಾರಿಗೆ ತಂದಿಲ್ಲ. ದೇಶದಲ್ಲಿ 12 ಕೋಟಿ ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದು ಸುಲೈಮಾನ್ ಕಿಡಿಕಾರಿದ್ದಾರೆ.

ಸರಕಾರವು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸಬೇಕು. ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಲಾಕ್‍ಡೌನ್ ಸಂದರ್ಭದ ಮೂರು ತಿಂಗಳ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಲೇಬೇಕು. ಎಲ್ಲ ಸಮುದಾಯದ ಜನರಿಗೂ ಹಣಕಾಸು ನೆರವು ನೀಡಬೇಕು. ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಹಣ ಬಿಡುಗಡೆ ಮಾಡಬೇಕು. ಇಲ್ಲವಾದರೆ ರಾಜ್ಯದೆಲ್ಲೆಡೆ ತೀವ್ರ ಹೋರಾಟ ನಡೆಸುತ್ತೇವೆ ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News