×
Ad

ಬೆಂಗಳೂರು ಹಿಂಸಾಚಾರದ ಹಿಂದೆ ರಾಜಕೀಯ ಪಕ್ಷಗಳ ಕುತಂತ್ರ: ನಳೀನ್ ಕುಮಾರ್ ಆರೋಪ

Update: 2020-08-12 17:29 IST

ಹುಬ್ಬಳ್ಳಿ, ಆ.12: ಕಳೆದ ರಾತ್ರಿ ಬೆಂಗಳೂರು ನಗರದಲ್ಲಿ ನಡೆದ ಹಿಂಸಾಚಾರದ ಹಿಂದೆ ರಾಜಕೀಯ ಪಕ್ಷಗಳ ಕುತಂತ್ರವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ದೂರಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ನಿಯಂತ್ರಣ ಹಾಗೂ ನೆರೆಯಿಂದ ಸಂಕಷ್ಟದಲ್ಲಿರುವ ಜನರ ರಕ್ಷಣೆ ವಿಚಾರದಲ್ಲಿ ಸರಕಾರ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ. ಎಲ್ಲೆಡೆಯೂ ಶಾಂತಿ ನೆಲೆಸಿದೆ. ಇದನ್ನು ಸಹಿಸದೆ ರಾಜಕೀಯ ಪಕ್ಷಗಳು ಗಲಭೆ ಸೃಷ್ಟಿಸುವ ಹುನ್ನಾರ ನಡೆಸುತ್ತಿವೆ ಎಂದು ಆಪಾದಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದ ಎರಡು ದಿನ ಮೊದಲು ಕಾರ್ಯಕ್ರಮದಲ್ಲಿ ಗದ್ದಲವಾದರೆ ಬೆಂಕಿ ಬೀಳಬಹುದು ಎಂದು ಕಾಂಗ್ರೆಸ್ ಶಾಸಕರೊಬ್ಬರು ಹೇಳಿದ್ದರು. ಅಲ್ಲಿ ಅದೇ ರೀತಿ ಆಯಿತು ಎಂದು ಹೇಳಿದರು.

ಬೆಂಗಳೂರಿನ ಘಟನೆಯನ್ನೇ ಬಂಡವಾಳ ಮಾಡಿಕೊಂಡ ದುಷ್ಕರ್ಮಿಗಳು ರಾಜ್ಯದಲ್ಲಿ ವಿನಾಕಾರಣ ದಾಂದಲೆ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ದಿಢೀರನೆ ಹಿಂಸಾಚಾರ ನಡೆಸಲು ದುಷ್ಕರ್ಮಿಗಳಿಗೆ ಅಷ್ಟೊಂದು ಕಲ್ಲುಗಳು ಹಾಗೂ ಪೆಟ್ರೋಲ್ ಹೇಗೆ ಸಿಕ್ಕಿತು? ಎಂದು ಪ್ರಶ್ನಿಸಿದರು. ಇವೆಲ್ಲದರ ಬಗ್ಗೆಯೂ ಸಂಪೂರ್ಣ ತನಿಖೆ ನಡೆಯಬೇಕು ಎಂದೂ ಆಗ್ರಹಿಸಿದರು.

14ರಂದು ಒಂಬತ್ತು ಕಟ್ಟಡಗಳಿಗೆ ಶಿಲಾನ್ಯಾಸ: ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷ ಸ್ವಂತ ಕಟ್ಟಡ ಹೊಂದಬೇಕು ಎಂದು ಅಮಿತ್ ಶಾ ಅವರು ಅಧ್ಯಕ್ಷರಾಗಿದ್ದಾಗ ಹೇಳಿದ್ದರು. ಅದರಂತೆ ರಾಜ್ಯದ ಎಲ್ಲ ಕಡೆ ಕಟ್ಟಡ ನಿರ್ಮಾಣ ಮಾಡಲಾಗುವುದು. ಆ. 14ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವೆಬಿನಾರ್ ಮೂಲಕ ತಿಪಟೂರಿನಲ್ಲಿ ಮಂಡಲ ಕಚೇರಿ ಮತ್ತು ಎಂಟು ಜಿಲ್ಲಾ ಕೇಂದ್ರಗಳಲ್ಲಿ ಕಚೇರಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಕಟೀಲ್ ತಿಳಿಸಿದರು.

ಹೆಗಡೆ ಅವರಿಂದ ವರದಿ ಪಡೆಯುವೆ: ಇತ್ತೀಚಿಗೆಯಷ್ಟೇ ಸಂಸದ ಅನಂತಕುಮಾರ್ ಹೆಗಡೆ ಬಿಎಸ್ಸೆನ್ನೆಲ್‍ನಲ್ಲಿ ದೇಶದ್ರೋಹಿಗಳು ತುಂಬಿದ್ದಾರೆ ಎಂಬ ವಿವಾದಾತ್ಮಕ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಅನಂತಕುಮಾರ್ ಏನು ಹೇಳಿದ್ದಾರೆ ಎಂಬುದು ಸರಿಯಾಗಿ ಗೊತ್ತಿಲ್ಲ. ಪೂರ್ಣ ಮಾಹಿತಿ ತಿಳಿದುಕೊಳ್ಳುವೆ. ಅವರಿಂದ ವಿವರಣೆ ಕೇಳುವೆ ಎಂದು ಸ್ಪಷ್ಟಪಡಿಸಿದರು.

ಮಥುರಾ ಹಾಗೂ ಕಾಶಿಯಲ್ಲಿ ಮಂದಿರ ನಿರ್ಮಾಣವಾಗಬೇಕು ಎಂದು ಈಶ್ವರಪ್ಪ ಹೇಳಿಕೆ ಕುರಿತು ‘ಅದು ಅವರ ವೈಯಕ್ತಿಕ ಹೇಳಿಕೆ. ಪಕ್ಷಕ್ಕೂ, ಆ ಹೇಳಿಕೆಗೂ ಸಂಬಂಧವಿಲ್ಲ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News