×
Ad

ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.92.16 ಅಂಕ ಪಡೆದ ದೃಷ್ಟಿಹೀನ ಬಾಲಕಿ

Update: 2020-08-12 23:43 IST
ಸಾಂದರ್ಭಿಕ ಚಿತ್ರ

ಮೈಸೂರು,ಆ.12: ದೃಷ್ಟಿ ದೋಷವಿದ್ದರೂ ಅದನ್ನು ಮೆಟ್ಟಿ ನಿಂತು ಸಾಧಿಸಬಹುದೆಂಬುದನ್ನು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಗ್ರಾಮೀಣ ಪ್ರತಿಭೆ ನಂದಿನಿ ತೋರಿಸಿಕೊಟ್ಟಿದ್ದಾಳೆ.

ಸಾಧಿಸುವ ಹಠ, ಛಲ, ಮನಸ್ಸು, ಅಗಾಧ ವಿಶ್ವಾಸ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಈಕೆ ತೋರಿಸಿಕೊಟ್ಟಿದ್ದಾಳೆ. ಅಂಧತ್ವದಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ ಇಡೀ ಶಾಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾಳೆ.

ನಂದಿನಿ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಅರಸು ಕಲ್ಲಹಳ್ಳಿಯ ಪ್ರಕಾಶ್ ಮತ್ತು ಭಾಗ್ಯ ದಂಪತಿಯ ಪುತ್ರಿ. ಹುಟ್ಟುವಾಗಲೇ ದೃಷ್ಟಿ ಕಳೆದುಕೊಂಡ ಈಕೆಗೆ ಓದುವ ಹಂಬಲ. ಛಲ ಬಿಡದೆ ಆತ್ಮ ವಿಶ್ವಾಸದಿಂದ ಮುನ್ನುಗ್ಗಿ ಒಂದರಿಂದ ಮೂರನೇ ತರಗತಿ ವರೆಗೆ ಹುಟ್ಟೂರಿನಲ್ಲೇ ವ್ಯಾಸಂಗ ಮಾಡಿದ್ದಾಳೆ.  ದೃಷ್ಟಿ ಹೀನತೆಯಿಂದ ಬಳಲುತ್ತಿರುವುದನ್ನ ಕಂಡ ಮೈಸೂರಿನ ಮೇಟಗಳ್ಳಿಯಲ್ಲಿರುವ ರಂಗರಾವ್ ಸ್ಮಾರಕ ವಿಕಲಚೇತನರ ಶಾಲೆಯ ಸಿಬ್ಬಂದಿ ಈಕೆಯನ್ನು ಶಾಲೆಗೆ ಕರೆದುಕೊಂಡು ಬಂದು ಬ್ರೇಲ್ ಎಜುಕೇಷನ್ ಕೊಡಿಸಿದ್ದರು. ಇದೀಗ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ 92.16 ರಷ್ಟು ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ಇತ್ತೀರ್ಣಳಾಗುವ ಮೂಲಕ ಇಡೀ ರಂಗರಾವ್ ಶಾಲೆಗೆ ಪ್ರಥಮಳಾಗಿ ಹೊರಹೊಮ್ಮಿದ್ದಾಳೆ. ಅಷ್ಟು ಮಾತ್ರವಲ್ಲ ಕಳೆದ ಏಳು ವರ್ಷಗಳ ಬಳಿಕ ಶಾಲೆಯಲ್ಲಿ ಅತ್ಯುನ್ನತ ಫಲಿತಾಂಶ ಪಡೆಯುವ ಮೂಲಕ ಇಡೀ ಶಾಲೆಗೆ ಮಾದರಿ ವಿದ್ಯಾರ್ಥಿನಿಯಾಗಿದ್ದಾಳೆ.

ಪ್ರಾಥಮಿಕ ಶಿಕ್ಷಣದಲ್ಲಿಯೇ ಸಾಧನೆ ಮಾಡುವ ಮೂಲಕ ಇತರರಿಗೆ ಹುಬ್ಬೇರುವಂತೆ ಮಾಡಿರುವ ಈಕೆಗೆ ತಂದೆ ತಾಯಿಯೇ ಪ್ರೇರಣೆ. ಅಂಧ ಮಗಳು ಎಂದು ಕಡೆಗಣಿಸದೆ, ಶಿಕ್ಷಣದಿಂದ ವಂಚಿಸದೆ, ಅಧಮ್ಯ ವಿಶ್ವಾಸ ತುಂಬಿದ್ದರ ಫಲವಾಗಿ ಪ್ರಥಮಳಾಗಿ ಹೊರಹೊಮ್ಮಿದ್ದಾಳೆ. ಮೊದಲಿಂದಲೂ ಈಕೆ ವಿದ್ಯಾಭ್ಯಾಸದಲ್ಲಿ ಅಪಾರ ಆಸಕ್ತಿ ಹೊಂದಿದ್ದು, ದೃಷ್ಟಿಹೀನಳಾದರೂ ಸಾಧನೆಯಲ್ಲಿ ಮಾತ್ರ ಮೇಲುಗೈ ಸಾಧಿಸಿ ಇತರರಿಗೆ ಮಾದರಿಯಾಗಿದ್ದಾಳೆ.

ನಂದಿನಿ ತಂದೆ ತಾಯಿ ಕೃಷಿ ಕುಟುಂಬದ ಹಿನ್ನೆಲೆಯವರಾಗಿದ್ದು, ಮಗಳ ವಿದ್ಯಾಭ್ಯಾಸಕ್ಕೆ ಅಂಧತ್ವ ಅಡ್ಡಿಯಾಗಿಲ್ಲ. ಸದಾ ಲವಲವಿಕೆಯಿಂದಿರುವ ಮಗಳ ಸಾಧನೆಗೆ ರಂಗರಾವ್ ಅಂಗವಿಕಲರ ಶಾಲೆಯ ಶಿಕ್ಷಕರ ಪ್ರೋತ್ಸಾಹವೇ ಕಾರಣ ಎಂದು ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾಧಿಸುವ ಹಠವೊಂದಿದ್ದರೆ ಏನನ್ನಾದರೂ ಮೆಟ್ಟಿನಿಂತು ಸಾಧನೆ ಶಿಖರ ಏರಬಹುದು ಎಂಬುದಕ್ಕೆ ನಂದಿನಿ ಮಾದರಿಯಾಗಿದ್ದಾಳೆ. ಈಕೆಯ ಈ ಸ್ಪೂರ್ತಿ ಇತರರಿಗೆ ಮಾದರಿ. ಸಂಸದ ಪ್ರತಾಪ್ ಸಿಂಹ ಈಕೆಯ ಮನೆಗೆ ತೆರಳಿ ಶಾಲು ಹಾರ, ಮೈಸೂರು ಪೇಟ ತೊಡಿಸಿ ಅಭಿನಂಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News