ಬೆಂಗಳೂರು ಗಲಭೆಗೆ ಗುಪ್ತಚರ ಇಲಾಖೆ ವೈಫಲ್ಯವೇ ಕಾರಣ: ಶಾಸಕ ತನ್ವೀರ್ ಸೇಠ್

Update: 2020-08-12 18:45 GMT

ಮೈಸೂರು,ಆ.12: ರಾಜ್ಯದಲ್ಲಿ ಗುಪ್ತಚರ ಇಲಾಖೆ ತುಂಬಾ ವೀಕ್ ಆಗಿದೆ. ಬೆಂಗಳೂರಿನ ಗಲಭೆಗೆ ಗುಪ್ತಚರ ಇಲಾಖೆ ವೈಫಲ್ಯವೇ ಕಾರಣ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಆರೋಪಿಸಿದರು.

ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದೆ ಏನಾಗುತ್ತದೆ ಎಂಬುದು ಗುಪ್ತಚರ ಇಲಾಖೆಗೆ ಗೊತ್ತಿರಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಸಾಕಷ್ಟು ಹಾನಿ ಆಗುವ ಸಾಧ್ಯತೆ ಇರುತ್ತದೆ. ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಗುಪ್ತಚರ ಇಲಾಖೆ ಆಕ್ಟಿವ್ ಆಗಿರಬೇಕಿತ್ತು. ವೈಫಲ್ಯದ ಬಗ್ಗೆ ಸರ್ಕಾರ ಕೂಡಲೇ ತನಿಖೆ ನಡೆಸಬೇಕು. ಗಲಭೆ ಪ್ರಕರಣದ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವೈಯಕ್ತಿಕವಾಗಿ ಏನು ಬೇಕಾದರೂ ಟೀಕಿಸಿ, ನಾವು ಜೀವಂತವಾಗಿದ್ದೇವೆ ಉತ್ತರ ಕೊಡುತ್ತೇವೆ. ಆದರೆ, ಜಾತಿ, ಧರ್ಮದ ವಿಚಾರಕ್ಕೆ ಕೈ ಹಾಕಬೇಡಿ. ಜಾತಿ ವ್ಯವಸ್ಥೆಯು ಸಮಾಜವನ್ನು ಬೇರ್ಪಡಿಸಬಾರದು. ಶಾಂತಿ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ರಾಮಮಂದಿರ ಭೂಮಿ ಪೂಜೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕೋಮು ಗಲಭೆ ಪ್ರಚೋದಿತ ಪೋಸ್ಟ್ ಗಳನ್ನು ಹಾಕಲಾಗುತ್ತಿದೆ. ಈಗಾಗಲೇ ಹಲವು ಆಯಪ್‍ಗಳನ್ನು ನಿಷೇಧ ಮಾಡಲಾಗಿದೆ. ಇಂಥ ಕೆಲಸ ಮತ್ತಷ್ಟು ನಡೆಯಬೇಕು. ಸಾಮಾಜಿಕ ಜಾಲತಾಣಗಳಿಂದಾಗಿ ಸಮಾಜದ ವಾತಾವರಣ ಹದಗೆಡುತ್ತಿದೆ. ಯುವಕರು ವಾಕ್ ಸ್ವಾತಂತ್ರ್ಯವನ್ನು ಸೋಶಿಯಲ್ ಮೀಡಿಯಾಗಳಲ್ಲಿ ದುರ್ಬಳಕೆ ಮಾಡಿಕೊಳ್ಳಬಾರದು ಎಂದರು.

ಯುವಕರಿಗೆ ಉದ್ಯೋಗ ಇಲ್ಲ. ಉದ್ಯೋಗ ಇಲ್ಲದೇ ಇಂಥ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ. ದುಡಿಯುವ ಕೈಗಳಿಗೆ ಕೆಲಸ ಕೊಡಬೇಕಿದೆ. ಆಗ ಇಂಥ ಚಟುವಟಿಕೆಗಳು ಕಡಿಮೆ ಆಗುತ್ತವೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News