ಈ ಬಾರಿ ಆನ್ ಲೈನ್ ನಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿವಿ ಘಟಿಕೋತ್ಸವ

Update: 2020-08-13 08:19 GMT

ವಿಜಯಪುರ, ಆ.13: ಕೊರೋನ ಹಾವಳಿಯ ಹಿನ್ನೆಲೆಯಲ್ಲಿ ಈ ಬಾರಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ 11ನೇ ಘಟಿಕೋತ್ಸವವನ್ನು ಆನ್​ಲೈನ್ ಮೂಲಕ ಆಚರಿಸಲು ನಿರ್ಧರಿಸಿದ್ದು, ಈ ಸಂಬಂಧ ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ವಿವಿಯ ಪ್ರಭಾರಿ ಕುಲಪತಿ ಡಾ.ಓಂಕಾರ ಕಾಕಡೆ ಮಾಹಿತಿ ನೀಡಿದ್ದಾರೆ

ಸದ್ಯ ಸಭೆ, ಸಮಾರಂಭಗಳಿಗೆ ನಿರ್ಬಂಧ ಇರುವ ಹಿನ್ನೆಲೆ ವಿವಿಯ ಅಕ್ಕ ಟಿವಿ, ಗೂಗಲ್ ಮೀಟ್, ಫೇಸ್​ಬುಕ್ ಲೈವ್ ಸೇರಿದಂತೆ ಹಲವು ಸಾಮಾಜಿಕ ತಾಣಗಳನ್ನು ಬಳಸಿಕೊಂಡು ಘಟಿಕೋತ್ಸವ ಆಚರಿಸಲಾಗುತ್ತಿದೆ.

ರಾಜ್ಯಪಾಲರ ಅನುಮತಿ ಪಡೆದು ಸೆಪ್ಟೆಂಬರ್ ಕೊನೆ ವಾರದಲ್ಲಿ ಮಹಿಳಾ ವಿ.ವಿಯ ಅಂಬೇಡ್ಕರ್ ಸಭಾಭವನದಲ್ಲಿ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗುವುದು. ರಾಜ್ಯಪಾಲ ವಜುಬಾಯಿ ವಾಲಾ ಅವರು ಆನ್​ಲೈನ್ ಮೂಲಕ ಮುಖ್ಯಭಾಷಣ ಮಾಡಲಿದ್ದಾರೆ ಎಂದವರು ತಿಳಿಸಿದ್ದಾರೆ.

ಅಲ್ಲದೇ, 72ಕ್ಕಿಂತ ಹೆಚ್ಚು ಬಂಗಾರದ ಪದಕ ವಿಜೇತೆಯರು, ನಗರದ ಗಣ್ಯರು, ವಿವಿಐಪಿಗಳು ಸೇರಿ 200-250 ಜನರಿಗೆ ಮಾತ್ರ ಆಹ್ವಾನ ನೀಡಲಾಗುವುದು. ಈ ಬಾರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಬ್ಬರು ಮಹಿಳೆಯರಿಗೆ ಗೌರವ ಡಾಕ್ಟರೇಟ್ ನೀಡಲು‌ ನಿರ್ಧರಿಸಲಾಗಿದೆ. ಇವರಿಬ್ಬರಿಗೂ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಲಾಗುವುದು. ಬಂಗಾರದ ಪದಕ ವಿಜೇತೆಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಉಳಿದ 10,500 ಪದವಿ, ಸ್ನಾತಕೋತ್ತರ ಪದವೀಧರೆಯರಿಗೆ ಅವರ ವಿಳಾಸಕ್ಕೆ ಸರ್ಟಿಫಿಕೇಟ್ ಕಳುಹಿಸಿಕೊಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News