ಶೃಂಗೇರಿ: ಶಂಕರಾಚಾರ್ಯರ ಪುತ್ಥಳಿಯ ಗೋಪುರದ ಮೇಲೆ ಧಾರ್ಮಿಕ ಚಿತ್ರಗಳಿರುವ ಬ್ಯಾನರ್ ಪತ್ತೆ

Update: 2020-08-13 10:12 GMT

ಚಿಕ್ಕಮಗಳೂರು, ಆ.13: ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಶಂಕರಾಚಾರ್ಯ ಅವರ ಪುತ್ಥಳಿ ಇದ್ದ ಗೋಪುರದ ಮೇಲೆ ಧಾರ್ಮಿಕ ಚಿತ್ರಗಳಿರುವ ಬ್ಯಾನರ್ ಒಂದು ಗುರುವಾರ ಬೆಳಗ್ಗೆ ಪತ್ತೆಯಾಗಿದೆ. ಕೂಡಲೇ ಬಿಜೆಪಿ, ಸಂಘಪರಿವಾರದ ಮುಖಂಡರು ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಪಟ್ಟಣದಲ್ಲಿ ಕೆಲ ಕಾಲ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪಟ್ಟಣದ ರಸ್ತೆಯೊಂದರ ಬಳಿ ನಿರ್ಮಿಸಲಾಗಿರುವ ಶಂಕರಾಚಾರ್ಯ ಪುತ್ಥಳಿಯ ಗೋಪುರದ ಮೇಲೆ ಧಾರ್ಮಿಕ ಚಿತ್ರಗಳಿರುವ ಬ್ಯಾನರ್ ಒಂದನ್ನು ಬುಧವಾರ ರಾತ್ರಿ ಸ್ಥಳೀಯರು ಗಮನಿಸಿದ್ದಾರೆ. ಈ ಸಂಬಂಧ ಬೆಳಗ್ಗೆ ಸಂಘಪರಿವಾರ ಹಾಗೂ ಬಿಜೆಪಿ ಮುಖಂಡರು ಮಾಜಿ ಸಚಿವ ಡಿ.ಎನ್.ಜೀವರಾಜ್ ನೇತೃತ್ವದಲ್ಲಿ ಪಟ್ಟಣದ ಪೊಲೀಸ್ ಠಾಣೆ ಬಳಿ ದಿಢೀರ್ ಪ್ರತಿಭಟನೆ ನಡೆಸಿದರು. ‘ಶಂಕರಾಚಾರ್ಯರ ಪುತ್ಥಳಿ ಮೇಲೆ ಎಸ್‍ ಡಿಪಿಐ ಬಾವುಟ ಹಾಕಿ ಪಟ್ಟಣದಲ್ಲಿ ಕೋಮು ಸಾಮರಸ್ಯ ಕೆಡಿಸಲು ಹುನ್ನಾರ ನಡೆಸಲಾಗಿದೆ. ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು. ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಪುತ್ಥಳಿ ಎದುರು ಪ್ರತಿಭಟನೆ ನಡೆಸುವುದಾಗಿ’ ಎಚ್ಚರಿಸಿದರು.

ಈ ವೇಳೆ ಪೊಲೀಸರೊಂದಿಗೆ ಪ್ರತಿಭಟನಕಾರರು ಕೆಲ ಹೊತ್ತು ವಾಗ್ವಾದ ನಡೆಸಿದ್ದು, ನಂತರ ಪೊಲೀಸರು ದೂರು ದಾಖಲಿಸಿಕೊಂಡು ತಪ್ಪಿತಸ್ಥರ ಬಂಧನಕ್ಕೆ ಕ್ರಮವಹಿಸಲಾಗುವುದು, ತನಿಖೆಗೆ ಕಾಲಾವಕಾಶ ನೀಡಬೇಕೆಂದು ಹೇಳಿದ್ದರಿಂದ ಪರಿಸ್ಥಿತಿ ತಣ್ಣಗಾಗಿದೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕೃತ್ಯ ಎಸಗಿದವರ ಪತ್ತೆಗೆ ಕ್ರಮವಹಿಸಿದ್ದಾರೆ.

.....................................

ಬುಧವಾರ ರಾತ್ರಿ ಯಾರೋ ಕಿಡಿಗೇಡಿಗಳು ಬಾವುಟದಂತಹ ಫ್ಲೆಕ್ಸ್ ಅನ್ನು ಶಂಕರಾಚಾರ್ಯರ ಪುತ್ಥಳಿ ಮೇಲೆ ಎಸೆದು ಹೋಗಿದ್ದಾರೆ. ಅದು ಮಳೆ ಗಾಳಿಗೆ ರಸ್ತೆ ಮೇಲೆ ಬಿದ್ದಿದೆ. ಘಟನೆ ಸಂಬಂಧ ಎಫ್‍ಐಆರ್ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗೆ ಕ್ರಮವಹಿಸಲಾಗಿದೆ. ಪಟ್ಟಣದಲ್ಲಿರುವ ಸಿಸಿ ಕ್ಯಾಮರಾಗಳನ್ನೂ ಪರಿಶೀಲಿಸಲಾಗುತ್ತಿದ್ದು, ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು. ಸದ್ಯ ಪಟ್ಟಣದಲ್ಲಿ ಘಟನೆ ಸಂಬಂಧ ಯಾವುದೇ ಸಮಸ್ಯೆಗಳು ಎದುರಾಗಿಲ್ಲ.

-ಹಕಾಯ್ ಅಕ್ಷಯ್ ಮಚೀಂದ್ರ, ಎಸ್ಪಿ

.....................................

ಜೀವರಾಜ್ ಆರೋಪದಲ್ಲಿ ಹುರುಳಿಲ್ಲ. ಪುತ್ಥಳಿ ಬಳಿ ಪತ್ತೆಯಾಗಿರುವುದು ಬಾವುಟವೇ ಅಲ್ಲ. ಯಾವುದೋ ಕಾರ್ಯಕ್ರಮವೊಂದರ ಬ್ಯಾನರ್ ಇದ್ದಂತಿದೆ. ಈ ಘಟನೆಗೂ ಎಸ್‍ಡಿಪಿಐಗೂ ಯಾವುದೇ ಸಂಬಂಧ ಇಲ್ಲ. ಏಕೆಂದರೆ ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿ ನಮ್ಮ ಪಕ್ಷವೇ ಅಸ್ತಿತ್ವದಲ್ಲಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರೂ ಅಲ್ಲಿಲ್ಲ. ಈ ಕೃತ್ಯಕ್ಕೆ ಕಾರಣರಾದವರನ್ನು ಪೊಲೀಸರು ಪತ್ತೆ ಮಾಡಿ ಕಾನೂನು ಕ್ರಮಕೈಗೊಳ್ಳಲಿ. ಪಟ್ಟಣದಲ್ಲಿನ ಸಾಮರಸ್ಯ ಕೆಡಿಸುವ ಶಕ್ತಿಗಳು ಯಾರೇ ಆದರೂ ಕಠಿಣ ಶಿಕ್ಷೆ ವಿಧಿಸಬೇಕು. ಸುಖಾಸುಮ್ಮನೆ ಪಕ್ಷವನ್ನು ಈ ವಿಚಾರದಲ್ಲಿ ಎಳೆದು ತರವುದು ಜೀವರಾಜ್‍ನಂತವರಿಗೆ ಶೋಭೆಯಲ್ಲ.

  - ಅಝ್ಮತ್ ಪಾಷಾ, ಎಸ್‍ ಡಿಪಿಐ ಜಿಲ್ಲಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News