×
Ad

ನಳಿನ್ ಕಟೀಲ್ ಅವರೇ, ಅಖಂಡ ಶ್ರೀನಿವಾಸಮೂರ್ತಿ ಹಿಂದೂ ಆಗದೆ ಯಾಕೆ ದಲಿತ ಆಗಿಬಿಟ್ಟರು: ಸಿದ್ದರಾಮಯ್ಯ ಪ್ರಶ್ನೆ

Update: 2020-08-13 19:07 IST

ಬೆಂಗಳೂರು, ಆ.13: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೇ, ನಾವು ಮನುಷ್ಯರ ಪರ, ಮನುಷ್ಯ ವಿರೋಧಿಗಳ ಪರ ಅಲ್ಲ, ನಾವು ದೀಪ ಹಚ್ಚುವವರ ಪರ, ಬೆಂಕಿ ಹಚ್ಚುವವರ ಪರ ಅಲ್ಲ, ನಾವು ಕಟ್ಟುವವರ ಪರ, ಕೆಡವುವವರ ಪರ ಅಲ್ಲ. ನಮ್ಮನ್ನು ಮತ್ತು ನಿಮ್ಮನ್ನು ಇದಕ್ಕಿಂತ ಚೆನ್ನಾಗಿ ಹೇಗೆ ಪರಿಚಯಿಸಲಿ ಹೇಳಿ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಗಾರಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಳಿನ್ ಕುಮಾರ್ ಕಟೀಲ್ ಅವರೇ, ನೀವು ದಲಿತರ ಪರವೋ? ಹಿಂದೂಗಳ ಪರವೋ? ನೀವೊಬ್ಬ ಹಿಂದುವಾದರೆ, ಅಖಂಡ ಶ್ರೀನಿವಾಸಮೂರ್ತಿ ಯಾಕೆ ಹಿಂದು ಅಲ್ಲ? ಅವರು ಯಾಕೆ ಹಿಂದು ಆಗದೆ ಕೇವಲ ದಲಿತ ಆಗಿಬಿಟ್ಟರು? ಹಿಂದುತ್ವದ ಸರಿಯಾದ ವ್ಯಾಖ್ಯಾನ ಏನೆಂದು ನಿಮ್ಮ ಹಿರಿಯರಿಂದ ಕೇಳಿ ತಿಳಿದುಕೊಂಡು ಸ್ಪಷ್ಟಪಡಿಸುವಿರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿ.ಜೆ.ಹಳ್ಳಿ ಗಲಭೆ ಪ್ರಕರಣವನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ, ಡಿಕೆಶಿ ದಲಿತ ಪರವೋ ಇಲ್ಲ ಭಯೋತ್ಪಾದಕರ ಪರವೋ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೇಳಿದ್ದ ಪ್ರಶ್ನೆಗೆ ಸಿದ್ದರಾಮಯ್ಯ ಈ ಮೇಲಿನಂತೆ ತಿರುಗೇಟು ನೀಡಿದ್ದಾರೆ.

`ಕಾಂಗ್ರೆಸ್ಸಿನ ಪರಿಸ್ಥಿತಿ `ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ' ಎಂಬಂತಾಗಿದೆ. ಗಲಭೆ ಮಾಡಿದ ಮತಾಂಧರ ಪರ ಮಾತನಾಡಿದರೆ ಹಿಂದುಳಿದ ವರ್ಗದವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ತಮ್ಮ ಶಾಸಕರ ಪರ ಮಾತನಾಡಿದರೆ ಮುಸ್ಲಿಮರ ಓಟ್ ಬ್ಯಾಂಕ್ ಕಳೆದುಕೊಳ್ಳಬೇಕಾಗುತ್ತದೆ. ಕೊನೆಗೆ, ಪೊಲೀಸರ ಮೇಲೆ ಗೂಬೆ ಕೂರಿಸಿ ಬಾಯಿ ಮುಚ್ಚಿಕೊಂಡಿದ್ದಾರೆ'

-ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News