ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ನವೀನ್ ಕಾಂಗ್ರೆಸ್ ಕಾರ್ಯಕರ್ತ: ಡಿಸಿಎಂ ಅಶ್ವತ್ಥನಾರಾಯಣ

Update: 2020-08-13 13:42 GMT

ಬೆಂಗಳೂರು, ಆ.13: ನಗರದ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಮತ್ತು ಕಾವಲ್ ಭೈರಸಂದ್ರದಲ್ಲಿ ನಡೆದ ಗಲಭೆ ಸದ್ಯಕ್ಕೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ ಎಂದಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ಯುವಕ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿದರು.

ಬೆಂಗಳೂರಿನಲ್ಲಿ ಗುರುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಬಗ್ಗೆ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವ ಕಾಂಗ್ರೆಸ್ಸಿಗರ ನಡೆ ಸರಿ ಇಲ್ಲ. ನವೀನ್ ಬಿಜೆಪಿ ಕಾರ್ಯಕರ್ತ ಅಲ್ಲ. ಕಾಂಗ್ರೆಸ್ ಕಾರ್ಯಕರ್ತ. ಈ ಬಗ್ಗೆ ಡಿಕೆ ಶಿವಕುಮಾರ್ ಅವರಿಗೆ ಮಾಹಿತಿ ಕೊರತೆ ಇದೆ. ಒಂದು ಪಕ್ಷದ ಅಧ್ಯಕ್ಷ ಸ್ಥಾನದಲ್ಲಿರುವ ವ್ಯಕ್ತಿ ಹೀಗೆ ಮಾತಾಡೋದು ಸರಿಯಲ್ಲ ಎಂದರಲ್ಲದೆ, ಶಿವಕುಮಾರ್ ಅವರಿದ್ದ ಪೋಸ್ಟರ್ ನಲ್ಲಿ ನವೀನ್ ಇರುವ ಫೋಟೋವನ್ನು ಪ್ರದರ್ಶನ ಮಾಡಿದರು.

ಸರಕಾರ ಮತ್ತು ಬಿಜೆಪಿ ವಿರುದ್ಧ ಡಿಕೆಶಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಉಪ ಮುಖ್ಯಮಂತ್ರಿ, ಕಾಂಗ್ರೆಸ್ ಮತ್ತು ಎಸ್‍ಡಿಪಿಐ ನಡುವೆ ಗುದ್ದಾಟ ಪ್ರಾರಂಭವಾಗಿದೆ. ಗಲಭೆ ಉಂಟಾಗಲು ಇದೇ ಕಾರಣ. ಅದನ್ನು ಮುಚ್ಚಿಟ್ಟುಕೊಳ್ಳಲು ಅವರು ಹೀಗೆ ಮಾಡುತ್ತಿದ್ದಾರೆ. ಪ್ರತಿ ಹಬ್ಬಕ್ಕೂ ನವೀನ್ ಪೋಸ್ಟ್ ಹಾಕ್ತಿದ್ದ. ಆತನ ಫೇಸ್ ಬುಕ್ ನೋಡಿದರೆ ನಿಮಗೆ ಎಲ್ಲಾ ಗೊತ್ತಾಗುತ್ತದೆ. ನವೀನ್ ಕಾಂಗ್ರೆಸ್ ಕಾರ್ಯಕರ್ತ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.

ಗಲಭೆ ಮಾಡಿದ ಕಿಡಿಗೇಡಿಗಳಿಂದಲೇ ಆಗಿರುವ ನಷ್ಟವನ್ನು ವಸೂಲಿ ಮಾಡಲಾಗುವುದು. ದೊಂಬಿ ಎಬ್ಬಿಸಿ ಸರಕಾರಿ ಆಸ್ತಿಗಳನ್ನು ಹಾನಿ ಮಾಡಿದ ಕಿಡಿಗೇಡಿಗಳನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಮಾಜಿ ಸಚಿವ ಕೆ.ಜೆ.ಜಾರ್ಜ್ ಜೊತೆಯಲ್ಲೂ ಆರೋಪಿ ಮುಝಾಮಿಲ್ ಪಾಷ ಕಾಣಿಸಿಕೊಂಡಿರುವ ಫೋಟೋ ಬಗ್ಗೆಯೂ ತನಿಖೆ ನಡೆಯುತ್ತಿದೆ. ಎಲ್ಲ ಕೋನಗಳಲ್ಲೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ತನಿಖೆಯಲ್ಲಿ ಎಲ್ಲವೂ ತಿಳಿಯಲಿದೆ. ಯಾರೇ ತಪ್ಪಿತಸ್ಥರು ಇದ್ದರೂ ಕ್ರಮ ಜರುಗಿಸಲಾಗುವುದು ಎಂದು ಡಿಸಿಎಂ ತಿಳಿಸಿದರು.

ಎಸ್‍ಡಿಪಿಐ ನಿಷೇಧಕ್ಕೆ ಚಿಂತನೆ

ಎಸ್‍ಡಿಪಿಐ ಸಂಘಟನೆಯನ್ನು ಬ್ಯಾನ್ ಮಾಡುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಹಿಂದಿನ ಘಟನೆಗಳಿಗೂ ಸಾಕ್ಷಿಗಳು ಇವೆ. ಅದರ ಹಿನ್ನೆಲೆಯಲ್ಲಿ ಇಂತಹ ಸಂಘಟನೆಗಳನ್ನು ನಿಷೇಧ ಮಾಡುವ ನಿಟ್ಟಿನಲ್ಲಿ ಸರಕಾರ ದಿಟ್ಟ ಕ್ರಮ ತೆಗೆದುಕೊಳ್ಳುತ್ತದೆ. ಅಗತ್ಯ ಸಾಕ್ಷ್ಯಗಳ ಸಂಗ್ರಹ ಮಾಡಿದ ನಂತರ ಈ ಸಂಘಟನೆಯನ್ನು ನಿಷೇಧ ಮಾಡುವ ನಿಟ್ಟಿನಲ್ಲಿ ಸರಕಾರ ಕ್ರಮ ತೆಗೆದುಕೊಳ್ಳುತ್ತದೆ.

-ಡಾ.ಸಿ.ಎನ್. ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News