ಸತ್ತ ದನದ ಚರ್ಮ ಸುಲಿದಿದ್ದಕ್ಕೆ, ಕುದುರೆ ಏರಿದ್ದಕ್ಕೆ, ಮೀಸೆ ಬಿಟ್ಟಿದ್ದಕ್ಕೆ ದಲಿತರನ್ನು ಕೊಂದದ್ದು ಯಾರ ಆಡಳಿತದಲ್ಲಿ

Update: 2020-08-13 16:03 GMT

ಬೆಂಗಳೂರು, ಆ.13: ಬಿ.ಎಲ್.ಸಂತೋಷ್ ಅವರು 'ಹಿಂದುತ್ವ'ದ ಜಪ ನಿಲ್ಲಿಸಿ 'ದಲಿತ' ಜಪ ಶುರು ಮಾಡಿದ್ದಾರೆ. 'ಹಿಂದು-ಒಂದು' ಎಂದು ಭಜನೆ ಮಾಡ್ತೀರಿ, ಜಾತಿ ಮೂಲದ ತಾರತಮ್ಯ, ಶೋಷಣೆಗಳ ಜೊತೆ ಗುದ್ದಾಡಿ, ದಲಿತರೊಬ್ಬರು ಶಾಸಕರಾದರೂ ಅವರನ್ನು ದಲಿತರೆಂದು ಹಂಗಿಸುತ್ತೀರಿ. ನಿಮ್ಮನ್ನು ಕೂಡಾ ನಿಮ್ಮ ಜಾತಿಯಿಂದಲೇ ಕರೆಯೋಣವೇ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‍ಗಳನ್ನು ಮಾಡಿರುವ ಅವರು, ರಾಜ್ಯದಲ್ಲಿ ನಿಮ್ಮದೇ ಪಕ್ಷ ಅಧಿಕಾರದಲ್ಲಿರುವಾಗ ಒಬ್ಬ ದಲಿತ ಶಾಸಕನ ಮನೆಗೆ ರಕ್ಷಣೆ ನೀಡಲು ನಿಮಗೆ ಸಾಧ್ಯವಾಗಿಲ್ಲ, ಇನ್ನು ಕೋಟ್ಯಂತರ ಸಂಖ್ಯೆಯ ಬಡ-ಅಸಹಾಯಕ ದಲಿತರ ಮನೆಗಳಿಗೆ ರಕ್ಷಣೆ ನೀಡಲು ಹೇಗೆ ಸಾಧ್ಯ? ಇದು ತಲೆತಗ್ಗಿಸುವಂತಹ ವೈಫಲ್ಯ ಎಂದು ನಿಮಗನಿಸುವುದಿಲ್ಲವೇ ಬಿ.ಎಲ್.ಸಂತೋಷ್ ಅವರೇ? ಎಂದು ಪ್ರಶ್ನಿಸಿದ್ದಾರೆ.

ದಲಿತರ ಬಗ್ಗೆ ನಿಮ್ಮ  ಮೊಸಳೆ ಕಣ್ಣೀರನ್ನು ದೇಶ ಕಂಡಿದೆ. ಸತ್ತ ದನದ ಚರ್ಮ ಸುಲಿದಿದ್ದಕ್ಕೆ, ಗೋಮಾಂಸ ತಿಂದಿದ್ದಕ್ಕೆ, ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ, ಕುದುರೆ ಏರಿದ್ದಕ್ಕೆ, ಮೀಸೆ ಬಿಟ್ಟಿದ್ದಕ್ಕೆ, ದಲಿತರ ಬೆನ್ನತ್ತಿ ಹಿಂಸಿಸಿ, ಸಾಯಿಸಿದ್ದು ಯಾರ ಆಡಳಿತದಲ್ಲಿ ಬಿ.ಎಲ್.ಸಂತೋಷ್ ಅವರೇ? ಎಂದು ಸಿದ್ದರಾಮಯ್ಯ ಕಿಡಿಗಾರಿದ್ದಾರೆ.

ದಲಿತರು ನಾಯಿಗಳೆಂದು ತುಚ್ಛೀಕರಿಸಿದವರು, ಮೀಸಲಾತಿಯನ್ನು ವಿರೋಧಿಸುತ್ತಿರುವವರು, ಸಂವಿಧಾನವನ್ನು ಬದಲಾಯಿಸಬೇಕೆನ್ನುವವರು, ಡಾ.ಅಂಬೇಡ್ಕರ್ ಅವರನ್ನು ಅವಮಾನಿಸುವವರು ಯಾವ ಪಕ್ಷದವರು ಬಿ.ಎಲ್.ಸಂತೋಷ್ ಅವರೇ? ಇಂತಹ ಮನುಷ್ಯ ವಿರೋಧಿಗಳ ವಿರುದ್ಧ ನಿಮ್ಮ ಪಕ್ಷವೇನಾದರೂ ಕ್ರಮ ಕೈಗೊಂಡಿದೆಯೇ? ಎಂದು ಅವರು ಕೇಳಿದ್ದಾರೆ.

ನಿಮ್ಮ ಕಾಲದಲ್ಲಿ ದಲಿತರ ಹತ್ಯೆ/ದೌರ್ಜನ್ಯ ದುಪ್ಪಟ್ಟಾಗಿದೆ ಎಂದು ಎನ್‍ಸಿಆರ್‍ಬಿಎಚ್‍ಕ್ಯೂ ವರದಿ ಹೇಳುತ್ತಿದೆ. ಹೀಗಿದ್ದರೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆಸುತ್ತೀರಿ. ಇದು ನಿಮ್ಮ ದಲಿತರ ಮೇಲಿನ ಕಾಳಜಿಯಲ್ಲವೇ ಬಿ.ಎಲ್.ಸಂತೋಷ್ ಅವರೇ? ಎಂದು ಸಿದ್ದರಾಮಯ್ಯ ದೂರಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಎಸ್‍ಸಿಪಿ-ಟಿಎಸ್‍ಪಿ ಯೋಜನೆಗೆ ನೀಡಿದ್ದ ಹಣ ರೂ.22,161 ಕೋಟಿ ಮಾತ್ರ. ನಮ್ಮ ಸರಕಾರದ 5 ವರ್ಷಗಳಲ್ಲಿ  ನೀಡಿದ್ದ ಹಣ ರೂ.88, 395 ಕೋಟಿ. ಬಿ.ಎಲ್.ಸಂತೋಷ್ ಅವರೇ, ನರೇಂದ್ರಮೋದಿ ಅವರಿಗೆ ಹೇಳಿ ಈ ಯೋಜನೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರ್ತೀರಾ ಬಿ.ಎಲ್.ಸಂತೋಷ್ ಅವರೇ? ಎಂದು ಅವರು ಕೇಳಿದ್ದಾರೆ.

ದಿವಂಗತ ಬಂಗಾರು ಲಕ್ಷ್ಮಣ್ ಅವರನ್ನು ನಿಮ್ಮ ಪಕ್ಷದ ಏಕೈಕ ಭ್ರಷ್ಟನೆಂಬ ರೀತಿಯಲ್ಲಿ ಬಲಿಗೊಟ್ಟಿದ್ದು ಯಾರು ಬಿ.ಎಲ್.ಸಂತೋಷ್ ಅವರೇ? ದಲಿತರು ಜಾಗೃತರಾಗಿದ್ದಾರೆ, ಹಿತೈಷಿಗಳು ಯಾರು? ಹಿತಶತ್ರುಗಳು ಯಾರು ಎನ್ನುವುದು ಅವರಿಗೆ ಗೊತ್ತಿದೆ. ಉರಿಯುವ ಮನೆಯಲ್ಲಿ ಗಳ ಇರಿಯುವ ಕೆಲಸ ಮಾಡ್ಬೇಡಿ ಎಂದು ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News