ಆರೆಸ್ಸೆಸ್-ಎಸ್‍ಡಿಪಿಐ ಒಂದೇ ನಾಣ್ಯದ ಎರಡು ಮುಖ: ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ

Update: 2020-08-13 15:25 GMT

ಬೆಂಗಳೂರು, ಆ. 13: `ಆರೆಸೆಸ್ಸ್, ಸಂಘಪರಿವಾರ ಮತ್ತು ಎಸ್‍ಡಿಪಿಐ ಎಲ್ಲವೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹೆಡ್ ಆಂಡ್ ಟೈಲ್ ಎರಡೂ ಅವರೇ. ದಕ್ಷಿಣ ಕನ್ನಡದಲ್ಲಿ ಇವರೆಲ್ಲ ಏನು ಮಾಡಿದ್ದರು ಎಂಬುದು ಗೊತ್ತಿದೆ. ಇದೀಗ ಬೆಂಗಳೂರು ಹಿಂಸಾಚಾರ ಘಟನೆಯಲ್ಲಿ ಏನು ಮಾಡಿದ್ದಾರೆಂದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಮೊದಲು ಎಸ್‍ಡಿಪಿಐ ನಿಷೇಧಿಸಲಿ' ಎಂದು ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಸವಾಲು ಹಾಕಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಗೃಹ ಸಚಿವರಾದ ಕೆ.ಜೆ.ಜಾರ್ಜ್ ಹಾಗೂ ಡಾ.ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎಸ್‍ಡಿಪಿಐಯಿಂದ ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಗಿದೆ. ಇದರಿಂದ ಬಿಜೆಪಿಗೆ ಯಾವುದೇ ಹಾನಿ ಇಲ್ಲ. ನಮ್ಮ ಪಕ್ಷದ ಮತಗಳು ಹಂಚಿ ಹೋಗುತ್ತಿವೆ. ಹೀಗಾಗಿ ಅವರನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಕೂಡಲೇ ಎಸ್‍ಡಿಪಿಐ ನಿಷೇಧಿಸಲಿ ಎಂದು ಪುನಃರುಚ್ಚರಿಸಿದರು.

ಪ್ರಕರಣದ ಸತ್ಯಶೋಧನೆಗೆ ಪಕ್ಷದಿಂದ ತಂಡವನ್ನ ರಚನೆ ಮಾಡಿದ್ದಾರೆ. ಘಟನೆಯ ಹಿಂದಿನ ವಿಚಾರವನ್ನ ಅರಿಯಬೇಕಿದೆ. ಪೊಲೀಸರು ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಗಮನಿಸಬೇಕಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರವಿದ್ದು, ಎಸ್‍ಡಿಪಿಐ ಸಂಘಟನೆಯನ್ನು ನಿಷೇಧಿಸಲು ಇವರು ಏಕೆ ಮೀನಾಮೇಷ ಏಣಿಸುತ್ತಿದ್ದಾರೆಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.

ಎಲ್ಲವೂ ಹೊರ ಬರಲಿ: ಡಿ.ಜಿ.ಹಳ್ಳಿ, ಕೆ.ಜಿ.ಹಳ್ಳಿ ಮತ್ತು ಕಾವಲ್ ಭೈರಸಂದ್ರ ಗಲಭೆ ಪ್ರಕರಣದ ಹಿಂದೆ ಯಾರು ಏನೇ ಆರೋಪ ಮಾಡಲಿ. ಆದರೆ, ಪೊಲೀಸರು ತನಿಖೆ ಮಾಡುತ್ತಿದ್ದು, ಎಲ್ಲವೂ ಹೊರಬರಲಿದೆ. ಅಲ್ಲಿಯವರೆಗೆ ಮನಸೋ ಇಚ್ಛೆ ಹೇಳಿಕೆ ನೀಡುವುದು ಸರಿಯಲ್ಲ ಎಂದ ಮಾಜಿ ಸಚಿವ ಕೆ.ಜೆ.ಜಾರ್ಜ್, ಪೊಲೀಸರು ಕರೆದರೆ ನಾನು ವಿಚಾರಣೆಗೆ ತೆರಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಮಾಜಿ ಗೃಹ ಸಚಿವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು, ಘಟನೆ ಹಿನ್ನೆಲೆ ಏನು? ಏಕೆ ಹೀಗಾಯ್ತು? ಈ ಕೃತ್ಯದ ಹಿಂದೆ ಯಾರಿದ್ದಾರೆ, ರಾಜಕೀಯ ಲೇಪನ ಇದೆಯೇ? ಈ ಎಲ್ಲದರ ಬಗ್ಗೆ ಚರ್ಚೆ ನಡೆದಿದೆ. ಇನ್ನು ಆಳವಾದ ಅಧ್ಯಯನ ಮಾಡಬೇಕು. ಅಲ್ಲಿನ ಸ್ಥಳೀಯರ ಅಭಿಪ್ರಾಯ ಪಡೆದುಕೊಳ್ಳಬೇಕಿದೆ. ಸದ್ಯ ಕರ್ಫ್ಯೂ ಹೇರಿದ್ದು, ಆ ಬಳಿಕ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲಿದ್ದೇವೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.

ಇಂತಹ ಘಟನೆ ನಡೆದಾಗ ರಾಜಕೀಯ ದೂರ ಇರಬೇಕು. ನಮಗೂ ರಾಜಕೀಯ ಮಾಡುವುದು ಗೊತ್ತು. ಆದರೆ, ಎಸ್ಡಿಪಿಐ, ಪಿಎಫ್‍ಐ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲವೂ ಹೊರಗೆ ಬಂದ ನಂತರ ತೀರ್ಮಾನ ಮಾಡಬೇಕಾಗುತ್ತದೆ ಎಂದ ಅವರು, ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿವಾಸದ ಮೇಲಿನ ದಾಳಿಯಲ್ಲಿ ಪಾಲ್ಗೊಂಡಿರುವವರ ಬಗ್ಗೆ ತನಿಖೆಯಿಂದ ಗೊತ್ತಾಗಬೇಕಿದೆ ಎಂದರು.

ಕೃತ್ಯದಲ್ಲಿ ಎಸ್‍ಡಿಪಿಐ ಪಾತ್ರ ಇರುವುದು ಸಾಬೀತಾದರೆ ಆ ಸಂಘಟನೆಯನ್ನು ನಿಷೇಧಿಸಲಿ. ಅವರ ತಪ್ಪು ಮಾಡಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಬೇಕು. ಕಾನೂನು ವಿರೋಧಿ ಕೃತ್ಯದಲ್ಲಿ ಯಾರೇ ಪಾಲ್ಗೊಂಡಿದ್ದರೂ ಅವರಿಗೆ ಕಠಿಣ ಶಿಕ್ಷೆ ಆಗಲೇಬೇಕು. ತನಿಖೆಗೆ ಮೊದಲೇ ಹೀಗೇ ಆಗಬೇಕು ಎಂದು ಹೇಳುವುದು ಸರಿಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News