ಜನಪ್ರತಿನಿಧಿಗಳು ಶಿಫಾರಸು ನೀಡುವ ಕೆಟ್ಟ ಪ್ರವೃತ್ತಿ ಅಂತ್ಯ ಕಾಣಬೇಕು: ಹೈಕೋರ್ಟ್

Update: 2020-08-13 17:37 GMT

ಬೆಂಗಳೂರು, ಆ.13: ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ತಮ್ಮ ಕ್ಷೇತ್ರದ ವ್ಯಕ್ತಿಯೊಬ್ಬರಿಗೆ ಮದ್ಯದ ಮಳಿಗೆ ತೆರೆಯಲು ಅನುಮತಿ ನೀಡುವಂತೆ ಎಂಎಸ್‍ಐಎಲ್‍ಗೆ ಶಿಫಾರಸು ಪತ್ರ ಬರೆದ ವಿಚಾರವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಇಂತಹ ಪದ್ಧತಿ ಕೂಡಲೇ ಕೊನೆಗೊಳ್ಳಬೇಕು ಎಂದಿದೆ.

ಸರಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಸಚಿವರು ಹಾಗೂ ಶಾಸಕರು ಅಥವಾ ಬೇರಾವುದೇ ಚುನಾಯಿತ ಜನ ಪ್ರತಿನಿಧಿಗಳು ಶಿಫಾರಸು ನೀಡುವ ವ್ಯವಸ್ಥೆ ಕೊನೆಗೊಳ್ಳಬೇಕು ಮತ್ತು ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕಾನೂನು ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟಿದೆ.

ರಾಜ್ಯದಲ್ಲಿ ಹೊಸದಾಗಿ ಮದ್ಯದಂಗಡಿ ತೆರೆಯಲು ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡಿ ಎಂಎಸ್‍ಐಎಲ್‍ಗೆ ಲೈಸೆನ್ಸ್ ನೀಡುವಂತೆ 2016ರಲ್ಲಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಆದೇಶ ರದ್ದುಪಡಿಸುವಂತೆ ಕೋರಿ ಬೀದರ್ ನ ಸೋಮನಾಥ ಎಂಬುವರು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ಶಿಫಾರಸು ಪದ್ಧತಿಗೆ ಅಸಮಾಧಾನ ವ್ಯಕ್ತಪಡಿಸಿದೆ.

ಔರಾದ್ ತಾಲೂಕಿನ ಮುಧೋಳ-ಬಿ ಗ್ರಾಮದಲ್ಲಿ ಎಂಎಸ್‍ಐಎಲ್ ಮಳಿಗೆ ತೆರೆಯಲು ಅನುಮತಿ ನೀಡಲು ಮತ್ತು ಈ ಮಳಿಗೆಯಲ್ಲಿ ಸಂತೋಷ್ ಹಾಗೂ ಸುನೀಲ್ ಎಂಬುವರು ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ಆದೇಶ ಹೊರಡಿಸಲು ಎಂಎಸ್‍ಐಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ 2019ರ ಡಿಸೆಂಬರ್ 19ರಂದು ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ಶಿಫಾರಸು ಪತ್ರ ಬರೆದಿದ್ದರು. ಅರ್ಜಿಯ ಹಿಂದಿನ ವಿಚಾರಣೆ ವೇಳೆ, ಈ ಪತ್ರವನ್ನು ಗಮನಿಸಿದ್ದ ಹೈಕೋರ್ಟ್, ವಿವರಣೆ ನೀಡುವಂತೆ ಸರಕಾರ, ಸಚಿವರು ಮತ್ತು ಎಂಎಸ್‍ಐಎಲ್‍ಗೆ ಸೂಚಿಸಿತ್ತು.

ಬುಧವಾರ ಅರ್ಜಿ ವಿಚಾರಣೆ ನಡೆದ ವೇಳೆ ಸಚಿವರ ಪರ ಹಾಜರಾದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿ, ಸಚಿವರು ನೀಡಿರುವ ಶಿಫಾರಸು ಪತ್ರವನ್ನು ಹಿಂಪಡೆದುಕೊಳ್ಳುತ್ತೇವೆ. ಹಾಗೆಯೇ, ಅದು ಶಿಫಾರಸು ಪತ್ರವಲ್ಲ. ಬದಲಾಗಿ ಮನವಿ ರೂಪದಲ್ಲಿ ನೀಡಲಾಗಿತ್ತು ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಚುನಾಯಿತ ಜನ ಪ್ರತಿನಿಧಿಗಳು ಸರಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಶಿಫಾರಸು ಪತ್ರ ನೀಡುವ ಕೆಟ್ಟ ಪ್ರವೃತ್ತಿ ಅಂತ್ಯ ಕಾಣಬೇಕು. ಶಿಫಾರಸು ಪತ್ರ ಬಂದಾಗ ಸರಕಾರಿ ಅಧಿಕಾರಿಗಳು ಪ್ರಭಾವಕ್ಕೆ ಒಳಗಾಗದೆ ಕಾನೂನು ಪ್ರಕಾರವೇ ಕ್ರಮ ಜರುಗಿಸಬೇಕು ಎಂದು ಸೂಚಿಸಿತು. ಹಾಗೆಯೇ ಎಂಎಸ್‍ಐಎಲ್ ಮುಖ್ಯಸ್ಥರು ಈ ಕುರಿತು ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ಆ.20ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News