ಶಾಲೆ ಆರಂಭಕ್ಕೆ ಯಾವುದೇ ತರಾತುರಿ ಇಲ್ಲ: ಸಚಿವ ಸುರೇಶ್‍ ಕುಮಾರ್ ಸ್ಪಷ್ಟನೆ

Update: 2020-08-13 18:11 GMT

ಮಂಡ್ಯ, ಆ.13: ಶಾಲೆಗಳ ಆರಂಭಕ್ಕೆ ಯಾವುದೇ ತರಾತುರಿ ಇಲ್ಲ ಎಂದು ಸ್ಪಷ್ಟಪಡಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ ಕುಮಾರ್, ಮಕ್ಕಳ ಆರೋಗ್ಯ ಮತ್ತು ಕಲಿಕೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗುರತ್ತಿದೆ ಎಂದು ಹೇಳಿದ್ದಾರೆ.

ಜಿಲ್ಲೆ ಎಸೆಸೆಲ್ಸಿ ಪರೀಕ್ಷೆಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿರುವ ಹಿನ್ನೆಲೆಯಲ್ಲಿ ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ವತಿಯಿಂದ ಗುರುವಾರ ನಗರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಶೀಘ್ರದಲ್ಲೇ ಶಿಕ್ಷಣ ಇಲಾಖೆಯಿಂದ ಎರಡು ಟಿವಿ ಚಾನಲ್‍ಗಳನ್ನು ಪ್ರಾಂಭಿಸಿ ಶಿಕ್ಷಣ ತಜ್ಞರಿಂದ ಪಾಠ ಬೋಧನೆ ಮಾಡಲು ಕ್ರಮವಹಿಸಲಾಗುವುದು. ಈಗಾಗಲೆ ಪುಸ್ತಕಗಳ ವಿತರಣೆಯಾಗಿದೆ. ದೂರದರ್ಶನದಲ್ಲಿ ಸೇತುಬಂಧ ಮೂಲಕ ಭೋದನೆ ನಡೆಯಲಿದೆ ಎಂದು ಅವರು ವಿವರಿಸಿದರು.

ಯಾವ ವಿದ್ಯಾರ್ಥಿಗೂ ಕೊರೋನ ಸೋಂಕು ಹರಡದಂತೆ ಎಸೆಸೆಲ್ಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲಾಗಿದೆ. ಮುಂಜಾಗ್ರತೆ ಮತ್ತು ಸುರಕ್ಷತೆ ಇದ್ದರೆ ಕೊರೋನ ನಿಯಂತ್ರಿಸಬಹುದು ಎಂದಬುದನ್ನು ಶಿಕ್ಷಕರು, ಅಧಿಕಾರಿಗಳು ತೋರಿಸಿಕೊಟ್ಟಿದ್ದಾರೆ ಎಂದು ಅವರು ಶ್ಲಾಘಿಸಿದರು.

ಈ ಬಾರಿಯಿಂದ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಮಂಡಳಿಯ ವೆಬ್‍ಸೈಟ್‍ನಲ್ಲಿ ಹಾಕಲಾಗುವುದು. ಬೇರೆ ಮಕ್ಕಳು ಈ ಉತ್ತರ ಪತ್ರಿಕೆಯನ್ನು ನೋಡಿ ಮಾದರಿಯಾಗಿ ಇಟ್ಟುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಎಸೆಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆಯ ಸಾಧನೆಗೆ ಕಾರಣರಾದ ನಿಕಟಪೂರ್ವ ಜಿಪಂ ಸಿಇಓ ಕೆ.ಯಾಲಕ್ಕಿಗೌಡ ಮತ್ತು ಡಿಡಿಪಿಐ ರಘುನಂದನ್ ಹಾಗೂ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಜಿಪಂ ಸಿಇಒ ಜುಲ್ಫಿಕರ್, ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ, ಇತರೆ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News