ರಾಜ್ಯದಲ್ಲಿ ರಕ್ತದ ಕೊರತೆ: ಸ್ವಯಂಪ್ರೇರಿತ ರಕ್ತದಾನಕ್ಕೆ ರೆಡ್‍ಕ್ರಾಸ್ ಸಂಸ್ಥೆ ಮನವಿ

Update: 2020-08-13 18:24 GMT

ಬೆಂಗಳೂರು, ಆ.13: ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಕ್ತದ ಕೊರತೆವುಂಟಾಗಿದ್ದು, ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ರಕ್ತದಾನಕ್ಕೆ ಮುಂದಾಗಬೇಕೆಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮನವಿ ಮಾಡಿದೆ.

ಕರ್ನಾಟಕ ರೆಡ್‍ಕ್ರಾಸ್ ರಕ್ತನಿಧಿಯು ಮಾಸಿಕ 3500 ಯೂನಿಟ್‍ಗಳಿಗಿಂತ ಹೆಚ್ಚು ರಕ್ತ ಸಂಗ್ರಹಿಸುತ್ತಿತ್ತು. ಇದನ್ನು ಸರಕಾರಿ ಹಾಗೂ ಸರಕಾರೇತರ ಆಸ್ಪತ್ರೆಗಳಿಗೆ, ಹೊರ ಜಿಲ್ಲೆಗಳ ರಕ್ತ ಸಂಗ್ರಹಣಾ ಘಟಕಗಳಿಗೆ ವಿತರಿಸಲಾಗುತ್ತಿತ್ತು. ಆದರೆ, ಕೊರೋನ ಸೋಂಕು ಪ್ರಾರಂಭವಾದಾಗಿನಿಂದ ರಕ್ತದಾನ ಪ್ರಕ್ರಿಯೆಗಳು ಬಹುತೇಕ ಸ್ಥಗಿತಗೊಂಡಿದ್ದು, ರಾಜ್ಯ ರಕ್ತನಿಧಿ ಕೇಂದ್ರಗಳಲ್ಲಿ ರಕ್ತ ಸಂಗ್ರಹದ ಕೊರತೆ ಎದುರಿಸುತ್ತಿವೆ.

ರಕ್ತಕ್ಕೆ ಯಾವುದೇ ಪರ್ಯಾಯ ಇಲ್ಲವಾಗಿದೆ. ರಕ್ತದ ಅವಶ್ಯಕತೆಯನ್ನು ಪೂರೈಸಲು ರಕ್ತದಾನಿಗಳಿಂದ ಮಾತ್ರ ಸಾಧ್ಯ. ಹೀಗಾಗಿ ಪ್ರತಿ ತಿಂಗಳು 3500ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹದ ಅಗತ್ಯವಿದೆ. ಪ್ರತಿ ದಿನವೂ 100ಯೂನಿಟ್‍ಗಳಿಗಿಂತ ಹೆಚ್ಚು ರಕ್ತದ ಬೇಡಿಕೆ ಬರುತ್ತಿದೆ. ಆದರೆ, ಇಷ್ಟು ರಕ್ತವನ್ನು ಪೂರೈಸಲು ಸಾಧ್ಯವಾಗದಿರುವುದು ಆತಂಕಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಎದುರಾಗಿರುವ ರಕ್ತದ ಕೊರತೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಸ್ವಯಂ ಪ್ರೇರಿತವಾಗಿ ಪ್ರತಿಯೊಬ್ಬರು ರಕ್ತದಾನ ಮಾಡಬೇಕಾಗಿದೆ. ದಾನಿಗಳು ಕರ್ನಾಟಕ ರೆಡ್‍ಕ್ರಾಸ್ ರಕ್ತನಿಧಿ, ನಂ.26, ರೆಡ್‍ಕ್ರಾಸ್ ಭವನ, ಮೊದಲನೇ ಮಹಡಿ, ರೇಸ್‍ಕೋರ್ಸ್ ರಸ್ತೆ, ಬೆಂ.01ಇಲ್ಲಿಗೆ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.080-22268435, 9035068435, 9902859859 ಸಂಪರ್ಕಿಸಲು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಎಸ್.ನಾಗಣ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News