ಸಿದ್ದರಾಮಯ್ಯರಿಗೆ ಅಹಿಂದ ಮಾತ್ರ ಅರ್ಥವಾಗುತ್ತೆ. ಭಾರತೀಯತೆ, ಹಿಂದುತ್ವ ಅರ್ಥವಾಗಲ್ಲ: ಸಿ.ಟಿ.ರವಿ

Update: 2020-08-14 12:13 GMT

ಚಿಕ್ಕಮಗಳೂರು, ಆ.14: ಬೆಂಗಳೂರಿನ ದೇವರ ಜೀವನಹಳ್ಳಿ ಮತ್ತು ಕೆಜೆಹಳ್ಳಿಯಲ್ಲಿ ನಡೆದ ಗಲಭೆ ಸಂಘಟಿತ ಅಪರಾಧ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಪ್ರಕರಣದ ತನಿಖೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದಾರೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ ರಾಜಕೀಯ ಮತ್ತು ಕಾಂಗ್ರೆಸ್ ಬಣ ರಾಜಕೀಯ ಸೇರಿ ಎಸ್ ಡಿಪಿಐ ಕುಮ್ಮಕ್ಕಿನೊಂದಿಗೆ ಗಲಭೆ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸರಕಾರ ಈಗಾಗಲೇ ನ್ಯಾಯಾಂಗ ತನಿಖೆಗೆ ಆದೇಶ ಮಾಡಿದ್ದು, ತನಿಖೆಯ ನಂತರ ಸಮಗ್ರ ವರದಿ ಸಿಗಲಿದೆ ಎಂದರು. 

ರಾಜ್ಯದಲ್ಲಿ ಗಲಭೆ ಎಬ್ಬಿಸಬೇಕೆಂದು ಕೆಲವರು ನೆಪಕ್ಕಾಗಿ ಕಾಯುತ್ತಿದ್ದರು. ಕೆಲವರು ಸಿಎಎ ಸಂದರ್ಭದಲ್ಲಿ ಗಲಭೆಗೆ ಸಂಚು ರೂಪಿಸಿದ್ದರು. ಆದರೆ ಆಗಲಿಲ್ಲ, ರಾಮಮಂದಿರ ತೀರ್ಪು ಸಂದರ್ಭದಲ್ಲೂ ಸಂಚು ರೂಪಿಸಿದ್ದರು. ಆಯೋಧ್ಯೆ ಭೂಮಿ ಪೂಜೆ ಸಂದರ್ಭದಲ್ಲೂ ಸಂಚು ರೂಪಿಸಿದ್ದರು. ಆದರೆ, ಸಾಧ್ಯವಾಗಿರಲಿಲ್ಲ. ಈಗ ಅಶ್ಲೀಲ ಫೇಸ್‍ಬುಕ್ ಪೋಸ್ಟರ್ ನೆಪವಾಗಿ ಇಟ್ಟುಕೊಂಡು ಗಲಭೆ ಸೃಷ್ಟಿಸಿದ್ದಾರೆ ಎಂದರು. 

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಟ್ಟೀಟ್‍ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮರುಟ್ವೀಟ್ ಮಾಡಿದಕ್ಕೆ ತಿರುಗೇಟು ನೀಡಿದ ಸಿ.ಟಿ.ರವಿ, ಸಿದ್ದರಾಮಯ್ಯ ಅವರಿಗೆ ಹಿಂದೂ ಪದದ ಅರ್ಥವಾಗಲಿ ಎಂದು ದಲಿತ ಪದ ಉಪಯೋಗಿಸಿದ್ದಾರೆ. ದಲಿತರೂ ಹಿಂದೂಗಳು ಎಂಬುದು ಅರ್ಥವಾಗಲಿ ಎಂದು ಸಂತೋಷ್ ಹಾಗೆ ಟ್ವೀಟ್ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅಹಿಂದ ಮಾತ್ರ ಅರ್ಥವಾಗುತ್ತೆ, ಭಾರತೀಯತೆ ಮತ್ತು ಹಿಂದುತ್ವ ಅರ್ಥವಾಗುವುದಿಲ್ಲ, ಹಾಗಾಗೀ ಹಿಂದುತ್ವ ಮತ್ತು ಭಾರತೀಯತೆ ಅರ್ಥವಾಗಲಿ ಎಂದು ಬಿ.ಎಲ್.ಸಂತೋಷ್ ದಲಿತ ಪದ ಉಪಯೋಗಿಸಿರುವುದು ಎಂದು ತಿಳಿಸಿದರು. 

ಶೃಂಗೇರಿ ಶಂಕರಾಚಾರ್ಯ ಪ್ರತಿಮೆ ಮೇಲೆ ಅನ್ಯಕೋಮಿನ ಧ್ವಜ ಹಾಕಿದ ಓರ್ವ ವ್ಯಕ್ತಿಯನ್ನು ಪೊಲೀಸ್ ಇಲಾಖೆ ಬಂಧಿಸಿದೆ. ಪೊಲೀಸ್ ಇಲಾಖೆ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದು, ಸಂಶಯ ಮತ್ತು ಆರಂಭಿಕ ಸಾಕ್ಷ್ಯದ ಆಧಾರ ಮೇಲೆ ಒಬ್ಬನನ್ನು ಬಂದಿಸಿದೆ. ಆತ ಮದ್ಯವ್ಯಸನಿ ಮತ್ತು ಮತ್ತು ಕೆಲವರ ಜೊತೆ ಒಡನಾಟ ಇದ್ದವನು ಎಂಬುದು ಮೇಲ್ನೋಟಕ್ಕೆ ಮಾಹಿತಿ ಸಿಕ್ಕಿದೆ. ಈ ಪ್ರಕರಣವನ್ನು ಹಲವು ಆಯಾಮಗಳಲ್ಲಿ ತನಿಖೆಗೆ ಒಳಪಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದೇನೆ. ಯಾರ ಜೊತೆಗಾದರೂ ಸಂಪರ್ಕ ಇತ್ತೇ ಅಥವಾ ಕೇವಲ ಮದ್ಯವ್ಯಸನ ಮಾಡಿ ಈ ಕೃತ್ಯ ನಡೆಸಿದ್ದಾನೋ, ಯಾವುದಾದರೂ ಸಂಘಟನೆಯ ಹಿನ್ನೆಲೆ ಇದೆಯೇ? ಎಂಬ ನಿಟ್ಟಿನಲ್ಲಿ ತನಿಖೆ ನಡೆಸಲು ಸೂಚನೆ ನೀಡಿದ್ದೇನೆ.
- ಸಿ.ಟಿ.ರವಿ, ಜಿಲ್ಲಾ ಉಸ್ತುವಾರಿ ಸಚಿವ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News