ಗೃಹ ಸಚಿವ ಬೊಮ್ಮಾಯಿ ರಾಜೀನಾಮೆಗೆ ಟ್ವಿಟರಿಗರ ಒತ್ತಾಯ; #ResignBSBommai ಟ್ರೆಂಡಿಂಗ್

Update: 2020-08-14 15:08 GMT

ಬೆಂಗಳೂರು, ಆ.14: ‘ನಿಮ್ಮ ಮೇಲೆ ಯಾವುದೇ ಕೇಸಿದ್ದರೂ, ಎಲ್ಲಾ ತೆಗೆದು ಹಾಕುತ್ತೇವೆʼ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ವಿಶ್ವ ಹಿಂದೂ ಪರಿಷತ್ ಮುಖಂಡರಿಗೆ ಹೇಳಿದ್ದಾರೆನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಗೃಹ ಸಚಿವ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಅವರ ಜೊತೆ ಮಾತನಾಡುವ ವಿಡಿಯೋವೊಂದು ಗುರುವಾರದಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಸ್ವತಃ ಗೃಹ ಸಚಿವರು 'ನಿಮ್ಮ ಮೇಲೆ ಯಾವುದೇ ಕೇಸಿದ್ದರೂ ಎಲ್ಲಾ ತೆಗೆದು ಹಾಕುತ್ತೇವೆ' ಎಂದು ಹೇಳಿದ್ದಾರೆನ್ನಲಾದ ಅಡಿಬರಹದೊಂದಿಗೆ ವಿಡಿಯೋ ವ್ಯಾಪಕ ಶೇರ್ ಆಗುತ್ತಿದೆ. ಈ ಸಂಬಂಧ ಗೃಹ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತವಾಗಿದ್ದು, ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂಬ ಅಭಿಯಾನ ಟ್ವಿಟರ್ ನಲ್ಲಿ ಆಗುತ್ತಿದೆ.

#ResignBSBommai ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಸುಮಾರು ಏಳು ಸಾವಿರದ ಎಂಟುನೂರಕ್ಕೂ ಅಧಿಕ ಮಂದಿ ಟ್ವೀಟ್ ಮಾಡಿದ್ದು, ಕರ್ನಾಟಕ ಟ್ರೆಂಡಿಂಗ್ ನಲ್ಲಿ ಮೂರನೇ ಸ್ಥಾನದಲ್ಲಿದೆ. 

"ಬೊಮ್ಮಾಯಿಯವರೇ, ನೀವು ರಾಜ್ಯದ ಗೃಹ ಸಚಿವರೋ ಅಥವಾ ಸಂಘಪರಿವಾರದ ಗೃಹ ಸಚಿವರೋ? ಗಲಭೆ ಆರೋಪಿಯ ಕೇಸು ತೆಗೆದು ಹಾಕುವ ನಿರ್ಧಾರಕ್ಕೆ ನೀವು ಬದ್ಧರೇ?" ಎಂದು ಟ್ವಿಟರಿಗರೊಬ್ಬರು ಪ್ರಶ್ನಿಸಿದ್ದಾರೆ.

"ಗೃಹ ಸಚಿವ ಬೊಮ್ಮಾಯಿಯವರೇ, ಕೋಮುಗಲಭೆಯಯಿಂದ ಕರಾವಳಿ ಹೇಗೆ ಹೊತ್ತಿ ಉರಿದಿದ್ದು ನಿಮಗೆ ಗೊತ್ತಿಲ್ಲವೇ? ಅಂತಹ ಗಂಭೀರ ಆರೋಪ ಹೊತ್ತವರ ಕೇಸು ನೀವು ತೆಗೆದು ಹಾಕುವಿರಾ?", "ಜನರಿಂದ ಆಯ್ಕೆಯಾದ ಪ್ರತಿನಿಧಿಯೊಬ್ಬರು ಈ ರೀತಿ ಗಲಭೆಕೋರನನ್ನು ಸಾರ್ವಜನಿಕವಾಗಿ ಮುಕ್ತ ಬೆಂಬಲ ನೀಡಿ ಹೇಳಿಕೆ ನೀಡಿದರೆ ಜನರಿಗೆ ಕಾನೂನಿನ ಮೇಲಿನ ವಿಶ್ವಾಸ ಹೇಗೆ ಉಳಿಯುತ್ತೆ?" ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ರಾಜ್ಯಕ್ಕೆ ಸಮರ್ಥ ಗೃಹ ಸಚಿವರು ಬೇಕು. ಕೋಮುಗಲಭೆಯ ಆರೋಪಿಗಳ ಜೊತೆ ಕೈ ಜೋಡಿಸಿದ ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಿ" ಎಂದು ಆಗ್ರಹಿಸಿದ್ದು, "ಕೋಮು ಗಲಭೆಯಲ್ಲಿ ಭಾಗಿಯಾದ ಬಜರಂಗದಳದ ಮುಖಂಡ ಶರಣ್ ಪಂಪ್ ವೆಲ್ ನ ಎಲ್ಲಾ ಕೇಸುಗಳನ್ನು ತೆಗೆದು ಹಾಕುತ್ತೇನೆ ಎಂದು ಸಾರ್ವಜನಿಕವಾಗಿ ಭರವಸೆ ನೀಡಿದ ರಾಜ್ಯದ ಗೃಹ ಸಚಿವ ಬಿ.ಎಸ್ ಬೊಮ್ಮಾಯಿ. ಇಂತಹ ಗೃಹ ಸಚಿವರಿಂದ ಪಾರದರ್ಶಕ ನ್ಯಾಯ ಮತ್ತು ಆಡಳಿತ ನಿರೀಕ್ಷಿಸಲು ಸಾಧ್ಯವೇ? ಎಂದು ಟ್ವಿಟರಿಗರೊಬ್ಬರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News