ಸರಕಾರ ಅನುಮತಿ ಕೊಡದಿದ್ದರೂ ಗಣೇಶೋತ್ಸವ ಮಾಡುತ್ತೇವೆ: ಪ್ರಮೋದ್ ಮುತಾಲಿಕ್

Update: 2020-08-14 17:32 GMT

ಹುಬ್ಬಳ್ಳಿ, ಆ.14: ರಾಜ್ಯ ಸರಕಾರ ಕೊರೋನ ನೆಪವೊಡ್ಡಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡದಿರುವುದನ್ನು ವಿರೋಧಿಸಿ ಗಜಾನನ ಮಹಾಮಂಡಲದ ವತಿಯಿಂದ ಆ. 17ರಂದು ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗಳ ಎದುರು ಮಣ್ಣಿನ ಗಣಪತಿಯೊಂದಿಗೆ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಲ್‍ಗಳು, ಬಾರ್ ಗಳು, ಸಾರಿಗೆ, ದೇವಸ್ಥಾನಗಳನ್ನು ತೆರೆಯಲು ಸರಕಾರ ಒಪ್ಪಿಗೆ ನೀಡಿದೆ. ಆದರೆ ಗಣಪತಿ ಪ್ರತಿಷ್ಠಾನಕ್ಕೆ ವಿರೋಧ ಎಕೆ ಎಂದು ಪ್ರಶ್ನಿಸಿದರು.

ಕೊರೋನ ಸೋಂಕು ಹರಡುತ್ತಿರುವ ಸಂಬಂಧ ನಮಗೂ ಸಮಾಜದ ಕುರಿತು ಕಾಳಜಿಯಿದೆ. ಆದರೆ, ಸರಕಾರ ನೂರು ಷರತ್ತುಗಳನ್ನು ವಿಧಿಸಿದರೂ ಸರಿ ನಾವು ಒಪ್ಪುತ್ತೇವೆಯಾದರೂ, ಗಣಪತಿ ಪ್ರತಿಷ್ಠಾನಕ್ಕೆ ಅನುಮತಿ ನೀಡಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯ ಸರಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡುವ ಜವಾಬ್ದಾರಿ ಆಯಾ ಜಿಲ್ಲಾಧಿಕಾರಿಗೆ ನೀಡಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅನುಮತಿ ಕೊಟ್ಟಿಲ್ಲ. ಇದನ್ನು ನಾವು ಒಪ್ಪುವುದಿಲ್ಲ ಎಂದರು.

ಮಹಾರಾಷ್ಟ್ರದಲ್ಲಿಯೂ ಕೋವಿಡ್ ಪ್ರಕರಣಗಳು ಇದ್ದರೂ ಜೂನ್ ನಲ್ಲಿಯೇ ಅನುಮತಿ ಕೊಡಲಾಗಿದೆ. ರಾಜ್ಯದಲ್ಲಿ ಯಾಕೆ ಕೊಡುತ್ತಿಲ್ಲ. ಸರಕಾರ ಅನುಮತಿ ಕೊಡಲಿ, ಬಿಡಲಿ ಗಣೇಶೋತ್ಸವ ಮಾಡುತ್ತೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News