ಎಚ್.ವಿಶ್ವನಾಥ್ ಪುತ್ರನಿಂದ ಜೀವ ಭಯ: ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ಆರೋಪ

Update: 2020-08-14 17:40 GMT

ಮೈಸೂರು,ಆ.14: ನನಗೆ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರ ಪುತ್ರ ಅಮಿತ್ ದೇವರಹಟ್ಟಿಯಿಂದ ಜೀವ ಭಯ ಇದ್ದು, ಇವರ ಆಪ್ತ ನನ್ನ ಮೇಲೆ ಹಲ್ಲೆ ನಡೆಸುವಂತೆ ಕೆಲವರನ್ನು ಎತ್ತಿಕಟ್ಟುತ್ತಿದ್ದಾರೆ ಎಂದು ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ಆರೋಪ ಮಾಡಿದರು.

ನಗರದ ಜಿ.ಪಂ.ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಶುಕ್ರವಾರ ನಡೆಯುತಿದ್ದ ಮಳೆ ಪ್ರವಾಹ ಹಾನಿ ಕುರಿತ ಜಿಲ್ಲಾ ಮಟ್ಟದ ಸಭೆಯಲ್ಲೇ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಎದುರೆ ತಮಗೆ ಜೀವ ಭಯ ಇದೆ ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಮನವಿ ಮಾಡಿದರು. ಇದೇ ವೇಳೆ ಅಮಿತ್ ದೇವರಹಟ್ಟಿ ಅವರ ಆಪ್ತ, ಎಂಎಲ್‍ಎ ಮಂಜುನಾಥ್‍ಗೆ ಹೊಡೆಯಿರಿ ಎಂದು ಹೇಳುವ ಆಡಿಯೋ ತುಣಕನ್ನು ಸಭೆಯಲ್ಲೇ ಎಲ್ಲರಿಗೂ ಕೇಳಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಪುತ್ರ ಮುಂದಿನ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಈಗಿನಿಂದಲೇ ಕ್ಷೇತ್ರದಲ್ಲಿ ಜನರನ್ನು ಎತ್ತಿಕಟ್ಟುತ್ತಿದ್ದಾರೆ. ಹುಣಸೂರು ನಗರದ ಗ್ರಾಮಠಾಣ ಜಾಗದ ಸಂಬಂಧ ಓರ್ವ ವ್ಯಕ್ತಿಯನ್ನು ಎತ್ತಿಕಟ್ಟಿ ಶಾಸಕರು ತೊಂದರೆ ಕೊಟ್ಟರೆ ಅವರ ಮೇಲೆ ಹಲ್ಲೆ ಮಾಡು ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಈ ಆಡಿಯೋವನ್ನು ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳಿಗೆ ನೀಡಿದ್ದೇನೆ ಎಂದು ಹೇಳಿದರು.

ನನ್ನ ಕ್ಷೇತ್ರದ ಜನರಿಗಾಗಿ ನಾನು ಪ್ರಾಣಬಿಡಲು ಸಿದ್ಧ. ಆದರೆ ನನ್ನ ಕ್ಷೇತ್ರದ ಜನರನ್ನು ಪ್ರಚೋದನೆಗೆ ಒಳಪಡಿಸಿ ಶಾಂತಿಯನ್ನು ಕದಡುತ್ತಿದ್ದಾರೆ. ಗ್ರಾಮಠಾಣ ಜಾಗವನ್ನು ಕಾನೂನಾತ್ಮಕವಾಗಿ ವಿತರಣೆ ಮಾಡುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದ್ದೇನೆ. ಈ ಜಾಗದಲ್ಲಿ ಬಡವರಿಗೆ ನಿವೇಶನ ಕಲ್ಪಿಸಬಹುದು ಎಂದು ಹೇಳಿದರು.

ಹುಣಸೂರಿನಲ್ಲಿ ನಡೆಯುವ ಕಾರ್ಯಕ್ರಮಗಳು ಶಿಷ್ಟಾಚಾರದ ಪ್ರಕಾರ ಶಾಸಕರ ನೇತೃತ್ವದಲ್ಲಿ ನಡೆಯುತ್ತದೆ. ಆದರೆ ಇತ್ತೀಚೆಗೆ ಅದರ ಬದಲಾವಣೆಯಾಗುತ್ತಿದೆ. ಹುಣಸೂರಿನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ವಿಧಾನಪರಿಷತ್ ಸದಸ್ಯ ಸೂಪರ್ ಜಿಲ್ಲಾ ಉಸ್ತುವಾರಿ ಸಚಿವ ಎಂದು ಹೇಳಿಕೊಂಡು ತಿರುಗುತ್ತಿರುವ ಅಮಿತ್ ದೇವರಹಟ್ಟಿ ಅನುಮತಿ ಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News