ಕೋವಿಡ್19: ಆರ್‌ಟಿಪಿಸಿಆರ್ ಪರೀಕ್ಷೆ ದರ ಕಡಿತಗೊಳಿಸಿದ ರಾಜ್ಯ ಸರಕಾರ

Update: 2020-08-14 17:45 GMT

ಬೆಂಗಳೂರು, ಆ.14: ಕೋವಿಡ್-19 ಸೋಂಕಿತರು ನಿರಾಳವಾಗುವ ಸುದ್ದಿ ನೀಡಿರುವ ರಾಜ್ಯ ಸರಕಾರ, ಆರ್‌ಟಿಪಿಸಿಆರ್ ಪರೀಕ್ಷೆ ದರ ಕಡಿತವೂ ಸೇರಿದಂತೆ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.

ಶುಕ್ರವಾರ ನಗರದಲ್ಲಿ ನಡೆದ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳ ಬಗ್ಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸುದ್ದಿಗಾರರಿಗೆ ತಿಳಿಸಿದರು.

ಸ್ವಾತಂತ್ರ್ಯ ದಿನಕ್ಕೆ ಮುನ್ನಾ ದಿನವೇ ಸರಕಾರ ಜನರಿಗೆ ಒಳ್ಳೆಯ ಸುದ್ದಿಯೊಂದನ್ನು ನೀಡುತ್ತಿದೆ. ಸರಕಾರಿ ಆಸ್ಪತ್ರೆಗಳಿಂದ ಖಾಸಗಿ ಲ್ಯಾಬ್‍ಗಳಿಗೆ ರೆಫರ್ ಮಾಡುವ ಸೋಂಕಿತರ ಆರ್‌ಟಿಪಿಸಿಆರ್ ಪರೀಕ್ಷೆ ದರವನ್ನು 2,000 ದಿಂದ 1,500 ರೂಪಾಯಿಗೆ ಇಳಿಸಲಾಗಿದೆ. ಅದೇ ರೀತಿ ನೇರವಾಗಿ ಖಾಸಗಿ ಲ್ಯಾಬ್‍ಗಳಿಗೆ ಹೋಗಿ ಈ ಪರೀಕ್ಷೆ ಮಾಡಿಸಿಕೊಂಡರೆ, ಅಲ್ಲಿ ವಿಧಿಸಲಾಗುತ್ತಿದ್ದ ದರವನ್ನು 3,000 ದಿಂದ 2,500 ರೂ.ಗಳಿಗೆ ಇಳಿಸಲಾಗಿದೆ ಎಂದು ಅವರು ವಿವರಿಸಿದರು.

ಈ ದರ ಕಡಿತವೂ ಎಲ್ಲ ವರ್ಗದ ರೋಗಿಗಳಿಗೆ ಅನುಕೂಲವಾಗಲಿದೆ. ಜತೆಗೆ, ಹೊಸದಾಗಿ 20 ಲಕ್ಷ ರ‍್ಯಾಪಿಡ್ ಆಂಟಿಜೆನ್ ಕಿಟ್ ಹಾಗೂ 18 ಲಕ್ಷ ಆರ್‌ಟಿಪಿಸಿಆರ್ ಟೆಸ್ಟ್ ಕಿಟ್‍ಗಳನ್ನು ಖರೀದಿ ಮಾಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುವ ಬಗ್ಗೆ ಈಗಾಗಲೇ ಐಸಿಎಂಆರ್ ಎಚ್ಚರಿಕೆ ನೀಡಿದೆ. ಹೀಗಾಗಿ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 115 ಐಸಿಯು ಬೆಡ್ ಆರಂಭಿಸಲು 12 ಕೋಟಿ ರೂ. ಮೊತ್ತದ ಉಪಕರಣ ಖರೀದಿ ಮಾಡಲು ಈ ಸಭೆಯಲ್ಲಿ ನಿರ್ಧಾರ ಮಾಡಲಾಯಿತು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಮರಣ ಪ್ರಮಾಣ ಕಡಿಮೆ ಮಾಡಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅದಕ್ಕಾಗಿ ಕೆಲ ಪರೀಕ್ಷೆಗಳನ್ನು ನಡೆಸಲೇಬೇಕಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಇಂಥ ಪರೀಕ್ಷೆಗಳನ್ನು ಮಾಡಲು ಸಮಸ್ಯೆಯಾದರೆ ಖಾಸಗಿ ಲ್ಯಾಬ್‍ಗಳಲ್ಲಿ ಮಾಡಲಾಗುವುದು. ಈ ಟೆಸ್ಟ್ ಮಾಡುವುದರಿಂದ ಆ ರೋಗದ ಹಂತ ತಿಳಿದು ಚಿಕಿತ್ಸೆ ಮಾಡಿ ಮರಣ ಪ್ರಮಾಣ ಕಡಿಮೆ ಮಾಡಬಹುದು. ಇದರ ಜತೆಗೆ ಪ್ಲಾಸ್ಮ ಥೆರಪಿ ರಾಜ್ಯದೆಲ್ಲೆಡೆ ವಿಸ್ತರಿಸಲಾಗುವುದು. ಈ ಥೆರಪಿ ಕೊಡಲು ಎಲ್ಲ ಕಡೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

18 ಸಾವಿರ ಜನಕ್ಕೆ ಸ್ಟಿರೊಲಜೀ ಪರೀಕ್ಷೆ ಮಾಡಲಾಗುವುದು. ರಾಜ್ಯದಲ್ಲಿ ಗ್ರೂಪ್ ಮಾಡಿ ಪರೀಕ್ಷೆ ಮಾಡಲಾಗುತ್ತದೆ. 18 ಸಾವಿರ ಆಂಟಿ ಬಾಡಿ ಟೆಸ್ಟ್ ಕೂಡ ಮಾಡಲಾಗುತ್ತಿದೆ. ಇಮ್ಯುನಾಲಜಿ ವಿಷಯದಲ್ಲಿ ಸಂಶೋಧನೆ ಮಾಡಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಕೋವಿಡ್ ಕಾರ್ಯಪಡೆ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News