ಬೆಂಗಳೂರಿನ ಗಲಭೆ ಕಾಂಗ್ರೆಸ್‍ನ ಪಾಪದ ಕೂಸು: ಎಚ್.ವಿಶ್ವನಾಥ್

Update: 2020-08-14 17:48 GMT

ಮೈಸೂರು,ಆ.14: ಬೆಂಗಳೂರಿನ ಕೆ.ಜಿ ಹಳ್ಳಿ ಮತ್ತು ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಭೆ ಕಾಂಗ್ರೆಸ್ ನ ಪಾಪದ ಕೂಸು. ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಬೀಳಲು ಕಾಂಗ್ರೆಸ್ ಕಾರಣ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಫಿಸಿದರು.

ನಗರದ ಜಿ.ಪಂ. ಸಭಾಂಗಣದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆ.ಜಿ.ಹಳ್ಳಿ ಗಲಭೆಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ಇದು ಕಾಂಗ್ರೆಸ್ ಹಾಗೂ ಸ್ಥಳೀಯ ಸಂಘಟನೆಗೂ ನಡೆಯುತ್ತಿರುವ ಗಲಭೆ. ಸಿಎಎ ಹೋರಾಟದಲ್ಲಿ ಪ್ರಚೋದನಕಾರಿ ಭಾಷಣಗಳು ಇದಕ್ಕೆಲ್ಲಾ ಕಾರಣ. ವಿಪಕ್ಷಗಳು ಜನರನ್ನು ಉದ್ರೇಕಗೊಳಿಸಿದ್ದು ಇನ್ನೂ ಬಿಸಿ ಕೆಂಡವಾಗಿ ಉಳಿದಿದೆ. ಆ ಕೆಂಡವನ್ನೇ ಇಟ್ಟುಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಶಾಸಕ ಝಮೀರ್ ಅಹ್ಮದ್ ವಿರುದ್ಧ ಕಿಡಿಕಾರಿದ ಅವರು, ಝಮೀರ್ ಅಹ್ಮದ್ ಬೆಂಕಿ ಬಿದ್ದ ಮನೆಗೆ ಹೋಗಿ ಸಾಂತ್ವನ ಹೇಳಿಲ್ಲ. ಬೆಂಕಿ ಹಾಕಿದವರ ಮನೆಗೆ ಹೋಗಿ ಸಾಂತ್ವನ ಹೇಳಿದ್ದಾರೆ. ಪಾದರಾಯನಪುರ ವಿಚಾರದಲ್ಲಿ ಜೈಲಿಗೆ ಹೋಗಿ ಬಂದವರನ್ನು ಮಾಲೆ ಹಾಕಿ ಸ್ವಾಗತಿಸಿದರು. ಇವರೇನು ಸ್ವಾತಂತ್ರ್ಯ ಹೋರಾಟ ಮಾಡಲು ಹೋಗಿದ್ದರೇ ಎಂದು ಪ್ರಶ್ನಿಸಿದರು.

ಬೆದರಿಕೆ ಹಾಕಲು ಸಾಧ್ಯವೇ ?

ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ದೊಡ್ಡ ರೌಡಿ. ಈತನಿಗೆ ಬೆದರಿಕೆ ಹಾಕಲು ಸಾಧ್ಯವೆ? ನಾನು ವಿಧಾನಪರಿಷತ್ ಸದಸ್ಯನಾಗಿರುವುದನ್ನು ಸಹಿಸದೆ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಎಚ್.ವಿಶ್ವನಾಥ್ ತಿರುಗೇಟು ನೀಡಿದರು.

ನಾನು ಜಿ.ಪಂ.ನಲ್ಲಿ ನಡೆದ ಸಭೆಯಲ್ಲಿ ಇದ್ದೆ. ನನ್ನ ಮಗ ತಪ್ಪು ಮಾಡಿದ್ದರೆ ನನ್ನ ಬಳಿ ಹೇಳಬಹುದಿತ್ತು. ಅದು ಬಿಟ್ಟು ಸುಮ್ಮನೆ ನನ್ನ ಮಗನ ಮೇಲೆ ಆರೋಪ ಮಾಡಲಾಗುತ್ತಿದೆ. ನಾನು ಈ ಸಂಬಂಧ ನನ್ನ ಮಗನನ್ನು ದೂರವಾಣಿ ಮೂಲಕ ವಿಚಾರಿಸಿದ್ದೇನೆ. ಅವನು ಇದೆಲ್ಲಾ ಸುಳ್ಳು ಎಂದು ಹೇಳಿದ್ದಾನೆ. ನಾನು ಮಂತ್ರಿಯಾಗುವುದನ್ನು ತಪ್ಪಿಸಲು ಇಂತಹ ಆರೋಪಗಳನ್ನು ಮಾಡಲಾಗುತ್ತಿದೆ. ಮಂಜುನಾಥ್ ದೊಡ್ಡ ರೌಡಿ. ಅವನನ್ನು ಹೆದರಿಸಲು ಸಾಧ್ಯವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News