ದಲಿತ-ಮುಸ್ಲಿಮರ ಸಹಭಾಳ್ವೆಗೆ ಸಂಘಪರಿವಾರದಿಂದ ಕೊಳ್ಳಿ: ದಲಿತ ಸಂಘಟನೆಗಳ ಆರೋಪ

Update: 2020-08-14 18:13 GMT

ಬೆಂಗಳೂರು, ಆ. 14: ದೇವರಜೀವನಹಳ್ಳಿ, ಕಾಡುಗೊಂಡನಹಳ್ಳಿ ಹಾಗೂ ಕಾವಲ್ ಭೈರಸಂದ್ರ ಗಲಭೆ ಪ್ರಕರಣದಲ್ಲಿ ಯಾರೇ ಪಾಲ್ಗೊಂಡಿದ್ದರು ಖಂಡನೀಯ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ಆದರೆ, ಈ ಗಲಭೆಗೆ ಮೂಲ ಕಾರಣ ಹಾಗೂ ಹಿಂಸಾಚಾರ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ(ಭೀಮಶಕ್ತಿ), ಬಹುಜನ ಕ್ರಾಂತಿ ಮೋರ್ಚಾ, ರಾಜ್ಯಾಧ್ಯಕ್ಷ ಹೆಬ್ಬಾಳ ವೆಂಕಟೇಶ್, ಪ್ರಜಾ ವಿಮೋಚನಾ ಚಳವಳಿ ಅಧ್ಯಕ್ಷ ಮುನಿಆಂಜಿನಪ್ಪ ಆಗ್ರಹಿಸಿದ್ದಾರೆ.

ಈ ಸಂಬಂಧ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಮುಖಂಡರು, ಗೋಲಿಬಾರ್ ನಲ್ಲಿ ಮೃತಪಟ್ಟ ಅಮಾಯಕರ ಕುಟುಂಬಕ್ಕೆ ತಲಾ 1 ಕೋಟಿ ರೂ.ಪರಿಹಾರ ನೀಡಬೇಕು. ಇಡೀ ಪ್ರಕರಣದ ಬಗ್ಗೆ ನ್ಯಾಯಂಗ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಾನೂನು ರೀತಿಯಲ್ಲಿ ಕಠಿಣ ಶಿಕ್ಷೆ ವಿಧಿಸಬೇಕು. ಮಾಜಿ ಸಚಿವ ಬಿ.ಬಸವಲಿಂಗಪ್ಪ ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರದಲ್ಲಿ ದಲಿತರು ಮತ್ತು ಮುಸ್ಲಿಮರು ಬಹಳ ವರ್ಷಗಳಿಂದ ಅತ್ಯಂತ ಸಾಮರಸ್ಯ ಮತ್ತು ಸಹಭಾಳ್ವೆಯಿಂದ ಜೀವನ ನಡೆಸುತ್ತಿದ್ದರು. ಇದಕ್ಕೆ ಸಂಘಪರಿವಾರದ ಮನುವಾದಿಗಳು ಕೊಳ್ಳಿ ಇಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರವಾದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ನವೀನ್ ವಿರುದ್ಧ ತಕ್ಷಣವೇ ದೂರು ದಾಖಲಿಸಿ, ಆತನನ್ನು ಬಂಧಿಸಿದ್ದರೆ ಇಷ್ಟೆಲ್ಲಾ ಗಲಭೆಗೆ ಅವಕಾಶವೇ ಇರುತ್ತಿರಲಿಲ್ಲ. ಕೋಮುಸೂಕ್ಷ್ಮ ಪ್ರದೇಶ ಎಂಬ ಅರಿವಿದ್ದರೂ ಪೊಲೀಸರ ನಿರ್ಲಕ್ಷ್ಯತೆ, ಬೇಜವಾಬ್ದಾರಿಯಿಂದಾಗಿ ಗಲಭೆ ನಡೆದಿದೆ. ಇದರ ಹೊಣೆಯನ್ನು ಅವರೇ ಹೊರಬೇಕು. ಸಮಗ್ರ ತನಿಖೆಯಿಂದ ಸತ್ಯ ಬಹಿರಂಗಪಡಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News