ವಿಎಚ್‍ಪಿ ಮುಖಂಡರ ಕೇಸ್ ಗಳು ಕೈಬಿಡುವ ವೈರಲ್ ಸುದ್ದಿ ಬಗ್ಗೆ ಗೃಹ ಸಚಿವ ಬೊಮ್ಮಾಯಿ ಸ್ಪಷ್ಟನೆ

Update: 2020-08-15 12:16 GMT

ಹಾವೇರಿ, ಆ.15: ವಿಶ್ವ ಹಿಂದೂ ಪರಿಷತ್‍ನ ಮುಖಂಡರು ಮನವಿ ನೀಡಿ ಅನ್ಯಾಯ ಸರಿಪಡಿಸಿ ಎಂದಿದ್ದಾರೆ, ಅನ್ಯಾಯ ಯಾರಿಗಾದರೂ ಸರಿಪಡಿಸುವ ಕೆಲಸ ನನ್ನದು. ಆದರೆ, ನಾನೆಲ್ಲಿಯೂ ವಿಎಚ್‍ಪಿ ಕಾರ್ಯಕರ್ತರ ಮೇಲಿನ ಎಲ್ಲ ಪ್ರಕರಣಗಳನ್ನು ತೆಗೆದು ಹಾಕುತ್ತೇನೆ ಎಂದು ಹೇಳಿಲ್ಲವೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಹಿಂದಿನ ಕಾಂಗ್ರೆಸ್ ಸರಕಾರದ ಅಧಿಕಾರದ ಅವಧಿಯಲ್ಲಿ ಕೆಲವು ಸಂಘಟನೆಗಳಿಂದ ನಮ್ಮ ಮೇಲಿರುವ ಕೇಸ್‍ಗಳನ್ನು ಕೈ ಬಿಡಬೇಕು ಎಂದು ಮನವಿಗಳು ಬಂದಾಗ, ಹಲವು ಸಂಘಟನೆಗಳ ಮೇಲಿದ್ದ ಪ್ರಕರಣಗಳನ್ನು ಹಿಂಪಡೆದಿರುವ ಉದಾಹರಣೆ ಇದೆ. ಆದರೆ, ನಾವು ಕಾನೂನಾತ್ಮಕವಾಗಿಯೇ ನ್ಯಾಯ ಒದಗಿಸುತ್ತೇವೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಸಾಮಾಜಿಕ ಸ್ವಾಸ್ಥ್ಯ ಕದಡುವ ಪೋಸ್ಟ್ ಗಳನ್ನು ನಿಯಂತ್ರಿಸಲು, ಮುಂದಿನ ವಾರ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರ ಸಭೆ ಕರೆದಿದ್ದೇವೆ. ಪೋಸ್ಟ್ ಗಳನ್ನು ಪರಿಶೀಲಿಸಿದ ನಂತರವೇ ಪ್ರಕಟಿಸಲು ಸೂಚನೆ ನೀಡುತ್ತೇವೆ. ಮುಖ್ಯಸ್ಥರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲೂ ಯುಪಿ ಮಾದರಿ ಅನುಸರಿಸುತ್ತೀರಾ ಎಂಬ ಪ್ರಶ್ನೆಗೆ, ರಾಜ್ಯಾದ್ಯಂತ ಗಲಭೆ ನಡೆದಾಗ ಅವರಿಂದ ಉಂಟಾಗುವ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಗೆ, ಹಾನಿಗೊಳಪಡಿಸಿದವರಿಂದ ನಷ್ಟದ ಪರಿಹಾರವನ್ನು ವಸೂಲಿ ಮಾಡುವಂತೆ ಸುಪ್ರೀಂಕೋರ್ಟ್ ಮಾರ್ಗಸೂಚನೆ ನೀಡಿದೆ. ಅದರಂತೆ ನಷ್ಟ ಪರಿಹಾರ ವಸೂಲಿ ಮತ್ತು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಡಿ.ಕೆ. ಶಿವಕುಮಾರ್ ಗೆ ಈ ನೆಲದ ಕಾನೂನು ಗೊತ್ತಿದೆ ಎಂದು ಭಾವಿಸುತ್ತೇನೆ. ಕಾನೂನು ಪ್ರಕಾರ ಗಲಭೆಯಲ್ಲಿ ಪಾಲ್ಗೊಂಡವರಿಗೆ ನೋಟಿಸ್ ಕೊಟ್ಟು, ವಿಚಾರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ. ನೋಟಿಸ್ ಕೊಟ್ಟು ಯಾರನ್ನೂ ಹೆದರಿಸುವ ಪ್ರಶ್ನೆಯೇ ಇಲ್ಲ ಎಂದು ತಿರುಗೇಟು ನೀಡಿದರು. 

ರಾಜ್ಯದಲ್ಲಿ 4 ಎನ್‍ಡಿಆರ್‍ಎಫ್ ತಂಡಗಳಿವೆ. ಕೇಂದ್ರದಿಂದ ಹೆಚ್ಚುವರಿಯಾಗಿ ಇನ್ನೂ ನಾಲ್ಕು ತಂಡಗಳನ್ನು ಕಳುಹಿಸಿಲು ಒಪ್ಪಿಗೆ ನೀಡಲಾಗಿದೆ. ಅಂತರರಾಜ್ಯ ಮಟ್ಟದಲ್ಲಿ ಪ್ರವಾಹ ನಿರ್ವಹಣೆಗೆ ‘ಕ್ವಿಕ್ ರೆಸ್ಪಾನ್ಸ್ ಸಿಸ್ಟಮ್’ ಅನುಷ್ಠಾನಕ್ಕೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News