ಕಲಬುರಗಿ: ಆಟಿಕೆಯ ಬಂದೂಕಿನೊಂದಿಗೆ ಬ್ಯಾಂಕ್ ಗೆ ನುಗ್ಗಿ ಮದ್ಯ ಸೇವಿಸಲು ಹಣ ಕೊಡಿ ಎಂದ ವ್ಯಕ್ತಿ

Update: 2020-08-16 13:26 GMT

ಕಲಬುರಗಿ, ಆ.16: ನಗರದ ಗಂಜ್ ನಲ್ಲಿರುವ ಐಸಿಐಸಿಐ ಬ್ಯಾಂಕ್ ಗೆ ನುಗ್ಗಿದ ವ್ಯಕ್ತಿಯೋರ್ವ ಮದ್ಯ ಸೇವಿಸಲು ಹಣ ಬೇಕು ಎಂದು ರಂಪಾಟ ಮಾಡಿ, ಆಟಿಕೆಯ ಬಂದೂಕು ತೋರಿಸಿ ಆತಂಕ ಸೃಷ್ಟಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಗರದ ಮಿಜಗುರಿ ಬಡಾವಣೆ ನಿವಾಸಿ ಸುಲ್ತಾನ್ (35) ಬ್ಯಾಂಕ್ ಗೆ ನುಗ್ಗಿದ ವ್ಯಕ್ತಿ. ಈತ ಗುರುವಾರ ಕುಡಿದ ಮತ್ತಿನಲ್ಲಿ ಗಂಜ್ ಪ್ರದೇಶದಲ್ಲಿರುವ ಐಸಿಐಸಿಐ ಬ್ಯಾಂಕ್ ಗೆ ಬಂದು, ಆಟಿಕೆಯ ಬಂದೂಕು ಇಟ್ಟುಕೊಂಡು ಅಲ್ಲಿದ್ದ ಜನರನ್ನು ಹೆದರಿಸಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.

ಈತನ ಕೃತ್ಯದಿಂದ ಬ್ಯಾಂಕ್ ನಲ್ಲಿ ಆತಂಕ ಶುರುವಾಗಿ, ತಕ್ಷಣ ಬ್ಯಾಂಕ್ ಸಿಬ್ಬಂದಿ ಚೌಕ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಭಯ ಹುಟ್ಟಿಸಿದ ವ್ಯಕ್ತಿಗೆ ಸಾರ್ವಜನಿಕರು ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂದು ತಿಳಿದುಬಂದಿದೆ. 

ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ವಶಕ್ಕೆ ಪಡೆಸಿದ್ದಾರೆ. ಮಾನಸಿಕ ಅಸ್ವಸ್ಥನಾಗಿರುವುದರಿಂದ ಪ್ರಕರಣ ದಾಖಲಾಗಿಲ್ಲ, ವಿಚಾರಣೆ ನಡೆಸಿದ ನಂತರ ಆತನನ್ನು ಬಿಡಲಾಗಿದೆ ಎಂದು ಚೌಕ್ ಪೊಲೀಸ್ ಠಾಣೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News