ಮುಂಗಾರು ಅಧಿವೇಶನಕ್ಕೆ ಸಂಸತ್ ಸಿದ್ಧತೆ: ವೈರಸ್, ಕೀಟ ಕೊಲ್ಲಲು ಉಪಕರಣ, 10 ಪ್ರದರ್ಶನ ಪರದೆ ಅಳವಡಿಕೆ

Update: 2020-08-16 16:36 GMT

ಹೊಸದಿಲ್ಲಿ, ಆ. 16: ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ಘೋಷಿಸಲಾದ ಲಾಕ್‌ಡೌನ್ ಬಳಿಕ ಸಂಸತ್ತಿನ ಮೊದಲ ಮುಂಗಾರು ಅಧಿವೇಶನ ಹಲವು ಪ್ರಥಮಗಳು ಹಾಗೂ ಕ್ರಮಗಳಿಂದ ಗುರುತಿಸಲ್ಪಡಲಿದೆ. ಲೋಕಸಭೆ ಹಾಗೂ ರಾಜ್ಯ ಸಭೆಯ ಉಭಯ ಸದನಗಳ ಕೊಠಡಿ ಹಾಗೂ ಗ್ಯಾಲರಿಗಳ ಬಳಕೆ ಕೂಡ ಇದರಲ್ಲಿ ಸೇರಲಿವೆ ಎಂದು ಸರಕಾರದ ಮೂಲಗಳು ರವಿವಾರ ತಿಳಿಸಿದೆ.

ಸದಸ್ಯರು ಚರ್ಚೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವಂತೆ ಕೊಠಡಿಗಳಲ್ಲಿ ನಾಲ್ಕು ದೊಡ್ಡ ಪ್ರದರ್ಶನ ಪರದೆ (85 ಇಂಚು) ಹಾಗೂ ನಾಲ್ಕು ಗ್ಯಾಲರಿಗಳಲ್ಲಿ 6 ಸಣ್ಣ ಪರದೆ (40 ಇಂಚು) ಹಾಗೂ ಶ್ರಾವ್ಯ ಉಪಕರಣಗಳನ್ನು ಅಳವಡಿಸಲಾಗುವುದು. ಅಲ್ಲದೆ, ಸಂವಹನ ಉಪರಕರಣ ಹಾಗೂ ರಿಯಲ್‌ಟೈಮ್ ಅಡಿಯೊ ವಿಶುವಲ್ ಸಿಗ್ನಲ್‌ಗಳನ್ನು ವರ್ಗಾಯಿಸಲು ಕೇಬಲ್‌ಗಳನ್ನು ಅಳವಡಿಸಲಾಗುವುದು. ವೈರಸ್ ಹಾಗೂ ಕ್ರಿಮಿಗಳನ್ನು ಕೊಲ್ಲಲು ರಾಜ್ಯಸಭೆಯ ಏರ್‌ಕಂಡಿಷನ್ ಘಟಕದಲ್ಲಿ ಅಲ್ಟ್ರಾವಯಲೆಟ್ ರೇಡಿಯೇಶನ್ ವ್ಯವಸ್ಥೆ ಅಳವಡಿಸುವ ಪ್ರಸ್ತಾವ ಕೂಡ ಇದೆ. ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸುರಕ್ಷಿತ ಅಂತರ ಕಾಪಾಡಿಕೊಳ್ಳಲು ಈ ಸಿದ್ಧತೆ ಮಾಡಲಾಗುತ್ತಿದೆ. ಆದುದರಿಂದ ಸಂಸತ್ ಅಧಿವೇಶನ ಆಯೋಜಿಸಲು ಸರಕಾರ ನಿರ್ಧರಿಸಿದ ಕೂಡಲೇ ಕಟ್ಟಡ ಅದಕ್ಕೆ ಸಿದ್ಧವಾಗಲಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

ಬಲಾಬಲ ಆಧರಿಸಿ ರಾಜ್ಯ ಸಭೆಯ ಕೊಠಡಿ ಅಥವಾ ಗ್ಯಾಲರಿಯಲ್ಲಿ ವಿವಿಧ ಪಕ್ಷಗಳಿಗೆ ಆಸನ ವ್ಯವಸ್ಥೆ ಮಾಡಲಾಗುವುದು. ಉಳಿದವರಿಗೆ ಲೋಕಸಭೆಯ ಕೊಠಡಿಯ ಎರಡು ವಿಭಾಗಗಳಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗುವುದು. ಒಂದು ಭಾಗ ಆಡಳಿತಾರೂಢ ಪಕ್ಷಕ್ಕೆ ಹಾಗೂ ಇನ್ನೊಂದು ಭಾಗ ಇತರರಿಗೆ. ರಾಜ್ಯಸಭೆಯ ಕೊಠಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಸದನದ ನಾಯಕರು ಹಾಗೂ ವಿಪಕ್ಷಗಳ ಸದಸ್ಯರಿಗೆ ಆಸನ ಮೀಸಲಿರಿಸಲಾಗುವುದು. ಕೊಠಡಿಯಲ್ಲಿ ಡಾ. ಮನಮೋಹನ್ ಸಿಂಗ್, ಎಚ್.ಡಿ. ದೇವೇಗೌಡ ಅವರಿಗೆ ಕೂಡ ಆಸನ ಮೀಸಲಿರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಪ್ರತಿದಿನ ಸದನದಲ್ಲಿ ನಾಲ್ಕು ಗಂಟೆಗಳ ಕಾಲ ಕಲಾಪ ನಡೆಯಲಿದೆ ಲೋಕಸಬೆಯ ಕಲಾಪ ಮೊದಲು ನಡೆಯಲಿದೆ. ಅನಂತರ ರಾಜ್ಯ ಸಭೆಯ ಕಲಾಪ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಅಧಿಕಾರಿಗಳ ಗ್ಯಾಲರಿ ಹಾಗೂ ಪ್ರೆಸ್ ಗ್ಯಾಲರಿ ಎರಡೂ ಸಮೀಪದಲ್ಲಿರುವುದರಿಂದ ಅದನ್ನು ಪ್ರತ್ಯೇಕಿಸಲು ಪಾಲಿಕಾರ್ಬೋನೇಟ್ ಸೀಟುಗಳನ್ನು ಅಳವಡಿಸಲಾಗುವುದು. ಅಧಿಕಾರಿಗಳ ಗ್ಯಾಲರಿ ಹಾಗೂ ಪ್ರೆಸ್ ಗ್ಯಾಲರಿಯ ಆಸನ ವ್ಯವಸ್ಥೆ ಕೂಡ ಸುರಕ್ಷಿತ ಅಂತರದ ನಿಯಮಗಳನ್ನು ಅನುಸರಿಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News