ನ್ಯಾಯವಾದಿ ಪ್ರಶಾಂತ್ ಭೂಷಣ್ ವಿರುದ್ಧದ ಸುಪ್ರೀಂ ತೀರ್ಪು ಹಿಂಪಡೆಯಲು ಒತ್ತಾಯ
ಬೆಂಗಳೂರು, ಆ.16: ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ವಿರುದ್ಧ ಸುಪ್ರೀಂ ಕೋರ್ಟ್ ನೀಡಿರುವ ನ್ಯಾಯಾಂಗ ನಿಂದನೆ ತೀರ್ಪನ್ನು ಹಿಂಪಡೆಯಬೇಕೆಂದು ಎಸ್‍ಯುಸಿಐ ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಉಮಾ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನ್ಯಾಯವಾದಿ ಪ್ರಶಾಂತ್ ಭೂಷಣ್ ಮಾಡಿರುವ ಎರಡು ಸಾಲುಗಳ ಟ್ವೀಟ್‍ನಿಂದ ತನ್ನ ಘನತೆ ಮತ್ತು ಗೌರವಕ್ಕೆ ಬೆದರಿಕೆ ಉಂಟಾಗಿದೆಯೆಂದು ಸುಪ್ರೀಂ ಕೋರ್ಟ್ ಭಾವಿಸಿರುವುದು ತನ್ನ ನೈತಿಕತೆಯ ಮೇಲೆ ವಿಶ್ವಾಸ ಕಳೆದುಕೊಂಡಿದೆ ಎಂಬುದನ್ನು ದೇಶದ ಜನತೆ ಗಂಭೀರವಾಗಿ ಆಲೋಚಿಸುವಂತೆ ಮಾಡಿದೆ.
ಪ್ರಜೆಗಳ ಜನತಾಂತ್ರಿಕ ಹಕ್ಕುಗಳಿಗೆ ಮತ್ತು ನಾಗರಿಕ ಹಕ್ಕುಗಳಿಗೆ ಸಂಬಂಧಿಸಿದ ಹಲವಾರು ತುರ್ತು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವಾಗ, ಈ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆಯ ಪ್ರಕರಣವನ್ನು ತರಾತುರಿಯಲ್ಲಿ ಕೈಗೆತ್ತಿಕೊಂಡು ಮೂವರು ನ್ಯಾಯಾಧೀಶರ ಪೀಠ ನೀಡಿದ ತೀರ್ಪು ಉತ್ತರಕ್ಕಿಂತ ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಕೋಮುವಾದಿ ಶಕ್ತಿಗಳು ದೇಶದಲ್ಲಿ ಪ್ರಜಾತಂತ್ರಿಕ ಸಂಸ್ಥೆಗಳನ್ನು ಕೆಡವುತ್ತಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾಶ ಮಾಡುತ್ತಿವೆ. ಇವೆಲ್ಲವುಗಳ ವಿರುದ್ಧವಾಗಿ ಪ್ರಶಾಂತ್ ಭೂಷಣ್ ದನಿ ಎತ್ತುತ್ತಿದ್ದಾರೆ. ಆದರೆ, ಅವರ ವಿರುದ್ಧವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸರ್ವಾಧಿಕಾರಿ ಶಕ್ತಿಗಳಿಗೆ ಇನ್ನಷ್ಟು ಪುಷ್ಟಿ ನೀಡಿದಂತಾಗುತ್ತದೆ. ಹೀಗಾಗಿ ನ್ಯಾಯಾಂಗ ನಿಂದನೆಯ ತೀರ್ಪನ್ನು ವಾಪಸ್ ಪಡೆಯಬೇಕೆಂದು ಅವರು ಪ್ರಕಟನೆಯ ಮೂಲಕ ಒತ್ತಾಯಿಸಿದ್ದಾರೆ.