ಬಿಎಸ್‍ವೈಗೆ ಮುಜುಗರ ಸೃಷ್ಟಿಸಲು ಇದು 'ಸಂತೋಷ'ದ ಯೋಜನೆಯೇ?: ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನೆ

Update: 2020-08-16 17:28 GMT

ಬೆಂಗಳೂರು, ಆ. 16: ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಗಲಭೆ, ಹಿಂಸಾಚಾರದ ಬಗ್ಗೆ ಅಧ್ಯಯನಕ್ಕೆ ಪಕ್ಷದ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಅಧ್ಯಕ್ಷತೆಯಲ್ಲಿ `ಬಿಜೆಪಿ ತಂಡ' ರಚಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ, `ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮುಜುಗರ ಮಾಡಲು ಇದು 'ಸಂತೋಷ'ದ ಯೋಜನೆಯೇ?' ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಹೆಸರು ಉಲ್ಲೇಖಿಸದೆಯೇ ಪರೋಕ್ಷವಾಗಿ ಲೇವಡಿ ಮಾಡಿದ್ದಾರೆ.

ರವಿವಾರ ಟ್ವೀಟ್ ಮಾಡಿರುವ ಅವರು, `ಬಿಜೆಪಿ ಪಕ್ಷದವರು ತಮ್ಮದೇ ಸರಕಾರ ಅಧಿಕಾರದಲ್ಲಿದ್ದರೂ ಸ್ವತಃ ಸತ್ಯಶೋಧನ ಸಮಿತಿ ರಚಿಸಿರುವುದು ಏಕೆ ಎಂದು ತಿಳಿಯುತ್ತಿಲ್ಲ. ಇವರದ್ದೇ ಸರಕಾರ ಮತ್ತು ಗೃಹ ಇಲಾಖೆ ಮೇಲೆ ನಂಬಿಕೆ ಇಲ್ಲವೇ? ಅಥವಾ ಘಟನೆಯ ಪಕ್ಷದ ನಿಲುವನ್ನು ಪೊಲೀಸ್ ವರದಿಯಲ್ಲಿ ಸೇರಿಸಲು ಸಂಚೇ? ಅಥವಾ ಯಡಿಯೂರಪ್ಪನವರಿಗೆ ಮುಜುರ ಸೃಷ್ಟಿಸಲು ಇದು `ಸಂತೋಷ'ದ ಯೋಜನೆಯೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿವಾಸಕ್ಕೆ ಬೆಂಕಿ, ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಹಿಂಸಾಚಾರ ಪ್ರಕರಣ ಸಂಬಂಧ ಸತ್ಯಾಶೋಧನೆಗೆ ಕೆಪಿಸಿಸಿ ಅಧ್ಯಯನ ಸಮಿತಿ ರಚನೆ ಮಾಡಿದ ಬೆನ್ನಲ್ಲೆ ಬಿಜೆಪಿ ಪಕ್ಷ, ಘಟನೆಯ ಅಧ್ಯಯನಕ್ಕೆ ತಂಡವನ್ನು ರಚನೆ ಮಾಡಿದೆ. ತಂಡದಲ್ಲಿ ಅರವಿಂದ ಲಿಂಬಾವಳಿ, ಮಾಲೀಕಯ್ಯ ಗುತ್ತೇದಾರ್, ಎಂ.ಶಂಕರಪ್ಪ, ಎ.ನಾರಾಯಣಸ್ವಾಮಿ, ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಇದ್ದು, ಸ್ಥಳ ಪರಿಶೀಲನೆ ನಡೆಸಿ ಪಕ್ಷದ ರಾಜ್ಯಾಧ್ಯಕ್ಷರಿಗೆ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News