ಎಸೆಸೆಲ್ಸಿ ಮರುಮೌಲ್ಯಮಾಪನ ಶುಲ್ಕ ಹೊರೆ: ಸಂಕಷ್ಟ ತೋಡಿಕೊಂಡ ವಿದ್ಯಾರ್ಥಿಗಳ ಪೋಷಕರು

Update: 2020-08-16 18:20 GMT

ಬೆಂಗಳೂರು, ಆ.16: ಎಸೆಸೆಲ್ಸಿಯ ಮರುಮೌಲ್ಯಮಾಪನ ಶುಲ್ಕದ ಮೊತ್ತ ಅಧಿಕ ಹೊರೆಯಾಗುತ್ತಿದ್ದು, ಕೊರೋನ ಸಂಕಷ್ಟದ ಸಮಯದಲ್ಲಿ ಇಂತಹ ದುಬಾರಿ ಶುಲ್ಕ ಭರಿಸಲಾಗುತ್ತಿಲ್ಲ ಎಂದು ಹಲವು ಪೋಷಕರು ಸಂಕಷ್ಟವನ್ನು ತೋಡಿಕೊಂಡಿದ್ದಾರೆ.

ಒಂದು ವಿಷಯದ ಉತ್ತರ ಪತ್ರಿಕೆಯ ನಕಲು ಪ್ರತಿ ಪಡೆಯಲು 405, ಮರು ಮೌಲ್ಯಮಾಪನಕ್ಕೆ ಒಂದು ವಿಷಯಕ್ಕೆ 805 ಒಟ್ಟು 1,210 ಪಾವತಿಸಬೇಕು. ಇದು ಕೊರೋನ ಸೋಂಕು ಹರಡಿ ದುಡಿಮೆಯಿಲ್ಲದೆ ಪರಿತಪಿಸುತ್ತಿರುವ ಸಂದರ್ಭದಲ್ಲಿ ಹೆಚ್ಚು ಹೊರೆಯಾದಂತೆ ಭಾಸವಾಗುತ್ತಿದ್ದು, ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಲು ಯೋಚಿಸುವಂತಾಗಿದೆ ಎಂದು ಪೋಷಕರು ಹೇಳಿಕೊಂಡಿದ್ದಾರೆ.

ಮರುಮೌಲ್ಯಮಾಪನದಲ್ಲಿ 6 ಅಥವಾ ಅದಕ್ಕಿಂತ ಹೆಚ್ಚು ಅಂಕಗಳ ವ್ಯತ್ಯಾಸ ಬಂದರೆ ಮಾತ್ರ ಶುಲ್ಕ ಮರುಪಾವತಿ ಮಾಡುತ್ತಾರೆ. ಒಂದೆರಡು ಅಂಕಗಳು ಬಂದರೆ ಮರುಪಾವತಿ ಇಲ್ಲ. ಆದರೆ, ಸದ್ಯಕ್ಕೆ ಅಷ್ಟು ಹಣ ಪಾವತಿಸಲೂ ಹಿಂದೆ-ಮುಂದೆ ನೋಡುವಂತಾಗಿದೆ ಎಂದು ನಗರದ ನಂದೀಶ್‍ ಗೌಡ ಎಂಬುವವರು ಹೇಳಿದ್ದಾರೆ.

ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರೂ ಸೆಪ್ಟೆಂಬರ್ ನಲ್ಲಿ ನಡೆಯುವ ಪೂರಕ ಪರೀಕ್ಷೆ ತೆಗೆದುಕೊಳ್ಳಲೇಬೇಕು. ಪ್ರತಿ ವಿಷಯಕ್ಕೆ 300 ಶುಲ್ಕ ವಿಧಿಸಲಾಗಿದೆ. ಇದರಿಂದ ಹೆಚ್ಚು ಹೊರೆಯಾಗುತ್ತಿದೆ ಎಂದು ಜಯನಗರದ ವಿದ್ಯಾರ್ಥಿನಿ ಶೋಭಾ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಮರುಮೌಲ್ಯಮಾಪನ ಶುಲ್ಕ ಕಳೆದ ವರ್ಷ ಎಷ್ಟಿತ್ತೋ, ಅಷ್ಟೇ ಇದೆ. 8.5 ಲಕ್ಷ ವಿದ್ಯಾರ್ಥಿಗಳ ಉತ್ತರಪತ್ರಿಕೆ ಮೌಲ್ಯಮಾಪನ ವೇಳೆ ಸಣ್ಣ–ಪುಟ್ಟ ದೋಷಗಳಾಗಿರಬಹುದು ಎಂದು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಅಧಿಕಾರಿಯೊಬ್ಬರು ಹೇಳಿದರು.

ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ಎಷ್ಟೋ ವಿದ್ಯಾರ್ಥಿಗಳ ಅಂಕಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹಲವು ಹಂತಗಳಲ್ಲಿ ಪರಿಶೀಲನೆ ನಡೆಸಿದ ನಂತರವೇ ಮೌಲ್ಯಮಾಪನ ಅಂತಿಮಗೊಳಿಸಿರಲಾಗುತ್ತದೆ. ಉತ್ತರ ಪತ್ರಿಕೆಗಳ ನಕಲು ಪ್ರತಿ ಪಡೆಯಲು ಆ.21, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಆ. 24 ಕೊನೆಯ ದಿನವಾಗಿದೆ ಎಂದು ಅವರು ಮತ್ತೊಮ್ಮೆ ನೆನಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News