ಮೃತದೇಹವನ್ನು ಸೈಕಲ್‌ನಲ್ಲೇ ಸಾಗಾಟ ಪ್ರಕರಣ: ಘಟನೆ ಮರುಕಳಿಸದಂತೆ ಕ್ರಮಕ್ಕೆ ಸಚಿವ ಜಾರಕಿಹೊಳಿ ಸೂಚನೆ

Update: 2020-08-17 06:17 GMT

ಬೆಳಗಾವಿ, ಆ.17: ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಎಂಬಲ್ಲಿ ಮೃತಪಟ್ಟ 70 ವರ್ಷದ ವೃದ್ಧರೊಬ್ಬರ ಮೃತದೇಹವನ್ನು ಅಂತ್ಯ ಸಂಸ್ಕಾರಕ್ಕೆ ಕುಟುಂಬಸ್ಥರು ಸೈಕಲ್‌ನಲ್ಲೇ ಸಾಗಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತು ಟ್ವೀಟರ್‌ನಲ್ಲಿ ವೀಡಿಯೊ ಹಾಕಿ ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರಕಾರವನ್ನು ಟೀಕಿಸಿದ್ದಾರೆ.

‘‘ಮುಖ್ಯಮಂತ್ರಿಯವರೇ, ನಿಮ್ಮ ಸರಕಾರಿ ಎಲ್ಲಿದೆ? ಮೃತದೇಹ ಸಾಗಾಟಕ್ಕೆ ಆ್ಯಂಬುಲೆನ್ಸ್ ಸೇವೆ ಏಕೆ ಸಿಗುತ್ತಿಲ್ಲ ?’’ ಎಂದು ಪ್ರಶ್ನಿಸಿದ ಡಿಕೆಶಿ, ‘‘ಈ ಅಸಮರ್ಥ ಸರಕಾರವು ಕೊರೋನ ಸಾಂಕ್ರಾಮಿಕವನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ’’ ಎಂದು ಟೀಕಿಸಿದ್ದಾರೆ.

ಘಟನೆ ಮರುಕಳಿಸದಂತೆ ಕ್ರಮಕ್ಕೆ ಸೂಚನೆ: ಸಚಿವ ರಮೇಶ್ ಜಾರಕಿಹೊಳಿ
ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ಇಂತಹ ಅಮಾನವೀಯ ಘಟಕಗಳು ಮರುಕಳಿಸದಂತೆ, ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

ಮೃತರ ಸಂಸ್ಕಾರವನ್ನೂ ಗೌರವಯುತವಾಗಿ ಮಾಡಬೇಕು. ಮಹಾಮಾರಿ ಕೊರೋನ ಸೋಂಕಿನಿಂದಾಗಲೀ, ಬೇರೆ ಯಾವುದೇ ರೀತಿಯ ಅನಾರೋಗ್ಯದಿಂದ ಮೃತರಾದ ವ್ಯಕ್ತಿಗಳ ಅಂತ್ಯಕ್ರಿಯೆಗೆ ಅಧಿಕಾರಿಗಳು ಸೂಕ್ತ ಸಹಕಾರ ನೀಡಬೇಕು. ಅಂತ್ಯಕ್ರಿಯೆ ನಡೆಸಲು ಏನಾದರೂ ತೊಂದರೆಗಳು ಆದ ಸಂದರ್ಭದಲ್ಲಿ ಅದಕ್ಕಾಗಿಯೇ ಒಂದು ದೂರವಾಣಿ ಸಂಖ್ಯೆ ರೂಪಿಸಿ, ಅದಕ್ಕಾಗಿ ಅಧಿಕಾರಿಯೊಬ್ಬರನ್ನು ನಿಯೋಜಿಸಲು ಆದೇಶಿಸಿದ್ದೇನೆ. ಮಂದಿನ ದಿನಗಳಲ್ಲಿ ಈ ರೀತಿಯ ಅಮಾನವೀಯ ಘಟನೆ ನಡೆದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿರುವುದಾಗಿ ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News