ವೃದ್ಧೆಯ ಕೊಲೆ ಪ್ರಕರಣ: ತನಿಖೆಯ ಹಾದಿ ತಪ್ಪುತ್ತಿದೆ- ಮೃತರ ಸಂಬಂಧಿಕರು, ಗ್ರಾಮಸ್ಥರ ಆರೋಪ

Update: 2020-08-17 11:31 GMT

ಮಡಿಕೇರಿ, ಆ.17: ಮರಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟೆಮಾಡು ಪರಂಬು ಪೈಸಾರಿಯಲ್ಲಿ ಇತ್ತೀಚೆಗೆ ನಡೆದ ಒಂಟಿ ವೃದ್ಧೆ ಕೊಲೆ ಪ್ರಕರಣದ ತನಿಖೆಯ ಹಾದಿ ತಪ್ಪಿದ್ದು, ಶಂಕಿತ ಇಬ್ಬರು ಆರೋಪಿಗಳನ್ನು ಬಂಧಿಸಿಲ್ಲವೆಂದು ಮೃತರ ಸಂಬಂಧಿಕರು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಟ್ಟೆಮಾಡು ಗ್ರಾಮಸ್ಥ ಎಂ.ಜಿ.ಪ್ರೇಮಾನಂದ, ಮೃತ ಮಹಿಳೆಯ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳಲ್ಲಿ ಇಬ್ಬರು ಆರೋಪಿಗಳನ್ನು ತನಿಖೆಯಿಂದ ಕೈಬಿಟ್ಟಿದ್ದು, ಝಕ್ರಿಯ ಎಂಬಾತನನ್ನು ಮಾತ್ರ ಬಂಧಿಸಿರುವುದು ಅನುಮಾನಗಳಿಗೆ ಎಡೆಮಾಡಿದೆ ಎಂದು ತಿಳಿಸಿದರು.

ಇದೇ ಆ.2 ರಂದು ಪರಂಬು ಪೈಸಾರಿಯಲ್ಲಿ ನೆಲೆಸಿದ್ದ ಒಂಟಿ ವೃದ್ಧೆ ಪಾರ್ವತಿ (74) ಅವರನ್ನು ಉಸಿರುಗಟ್ಟಿಸಿ ಕೊಲೆಮಾಡಿ ಮೈಮೇಲಿದ್ದ ಚಿನ್ನದ ಸರ ಮತ್ತು ಓಲೆಗಳನ್ನು ಅಪಹರಿಸಲಾಗಿದೆ ಎಂದು ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಪರಂಬು ಪೈಸಾರಿಯ ನಿವಾಸಿ ಝಕ್ರಿಯ ಎಂಬಾತನನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು.  

ಗ್ರಾಮದ ಇನ್ನೂ ಇಬ್ಬರು ಆರೋಪಿಗಳು ಭಾಗಿಯಾಗಿರುವ ಬಗ್ಗೆ ಝಕ್ರಿಯ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಕೂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಇದಾದ ಕೆಲವು ದಿನಗಳ ಬಳಿಕ ಝಕ್ರಿಯ ತನ್ನ ಹೇಳಿಕೆ ಬದಲಾಯಿಸಿ ತಾನೊಬ್ಬನೆ ಕೊಲೆ ಮಾಡಿರುವುದಾಗಿ ತಿಳಿಸಿದ ಹಿನ್ನೆಲೆ ಇಬ್ಬರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ ಎಂದು ದೂರಿದರು.

ಕೊಲೆಯಾದ ವೃದ್ಧೆ ಪಾರ್ವತಿ ಪರಂಬು ಪೈಸಾರಿಯಲ್ಲಿ 50 ವರ್ಷಗಳಿಂದ ನೆಲೆಸಿದ್ದರು. ಎಲ್ಲರೊಂದಿಗೆ ಅನ್ಯೋನ್ಯವಾಗಿದ್ದರು. ಸುಮಾರು 30 ವರ್ಷಗಳ ಹಿಂದೆ ತಮ್ಮ 15 ಸೆಂಟ್ ಜಾಗವನ್ನು ಗ್ರಾಮದ ನಿವಾಸಿಯೊಬ್ಬರಿಗೆ ಮಾರಾಟ ಮಾಡಿದ್ದರು. ಪಾರ್ವತಿ ಅವರ ಇಬ್ಬರು ಪುತ್ರರು ಕೆಲವು ವರ್ಷಗಳಿಂದ ಹೊರ ರಾಜ್ಯದಲ್ಲಿ ಶಾಶ್ವತವಾಗಿ ನೆಲೆಸಿರುವುದರಿಂದ ಇದರ ದುರ್ಲಾಭ ಪಡೆದ ವ್ಯಕ್ತಿಗಳು ಉಳಿದ ಒಂದೂವರೆ ಏಕರೆ ಜಾಗವನ್ನು ಕೂಡ ತಮಗೆ ಮಾರಾಟ ಮಾಡುವಂತೆ ವೃದ್ಧೆಯನ್ನು ಪೀಡಿಸುತ್ತಿದ್ದರು ಎಂದು ಪ್ರೇಮಾನಂದ ಆರೋಪಿಸಿದರು.

ಪ್ರಕರಣದ ಬಗ್ಗೆ ಅನೇಕ ಸಂಶಯಗಳಿದ್ದು, ಬಿಡುಗಡೆಯಾಗಿರುವ ಇಬ್ಬರನ್ನು ಮತ್ತೊಮ್ಮೆ ಬಂಧಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ಮೃತೆ ಪಾರ್ವತಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ, ಗ್ರಾಮಸ್ಥರೆಲ್ಲರು ಸಹಿ ಮಾಡಿದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳು ಹಾಗೂ  ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೀಡುವುದಾಗಿ ಇದೇ ಸಂದರ್ಭ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೃತೆ ಪಾರ್ವತಿ ಅವರ ಪುತ್ರ ಎ.ಬಾಲಕೃಷ್ಣ, ಗ್ರಾಮಸ್ಥರಾದ ಬಿ.ಎ.ಜಯರಾಮ, ಎಂ.ದರ್ಶನ್ ಸುಕುಮಾರ್ ಹಾಗೂ ಕೆ.ಪಿ.ಪ್ರಕಾಶ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News