ಕಮಲಾ ಹ್ಯಾರಿಸ್‌ಗೆ ಭಾರತೀಯ ಅಮೆರಿಕನ್ ಪತ್ರಿಕಾ ಕಾರ್ಯದರ್ಶಿ

Update: 2020-08-17 16:36 GMT
ಫೋಟೊ ಕೃಪೆ: twitter.com/sabrinasingh

ವಾಶಿಂಗ್ಟನ್, ಆ. 17: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿರುವ ಸೆನೆಟರ್ ಕಮಲಾ ಹ್ಯಾರಿಸ್, ತನ್ನ ಚುನಾವಣಾ ಪ್ರಚಾರ ತಂಡದ ಪತ್ರಿಕಾ ಕಾರ್ಯದರ್ಶಿಯಾಗಿ ಭಾರತೀಯ ಅಮೆರಿಕನ್ ಸಬ್ರಿನಾ ಸಿಂಗ್‌ರನ್ನು ನೇಮಿಸಿದ್ದಾರೆ.

32 ವರ್ಷದ ಸಬ್ರಿನಾ ಸಿಂಗ್, ಈ ಹಿಂದೆ ಇಬ್ಬರು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಗಳಾಗಿದ್ದ ನ್ಯೂಜರ್ಸಿ ಸೆನೆಟರ್ ಕಾರಿ ಬುಕರ್ ಮತ್ತು ನ್ಯೂಯಾರ್ಕ್‌ನ ಮಾಜಿ ಮೇಯರ್ ಮೈಕ್ ಬ್ಲೂಮ್‌ಬರ್ಗ್‌ರ ಪತ್ರಿಕಾ ತಂಡದ ಮುಖ್ಯಸ್ಥರಾಗಿದ್ದರು.

ಲಾಸ್ ಏಂಜಲಿಸ್ ನಿವಾಸಿಯಾಗಿರುವ ಸಬ್ರಿನಾ ಈ ಹಿಂದೆ ಡೆಮಾಕ್ರಟಿಕ್ ರಾಷ್ಟ್ರೀಯ ಸಮಿತಿಯ ವಕ್ತಾರೆಯಾಗಿದ್ದರು. ಅವರು ಸಾಮಾಜಿಕ ಸಂಘಟನೆ ‘ಇಂಡಿಯಾ ಲೀಗ್ ಆಫ್ ಅಮೆರಿಕ’ದ ಸದಸ್ಯ ಸರ್ದಾರ್ ಜೆ.ಜೆ. ಸಿಂಗ್‌ರ ಮೊಮ್ಮಗಳಾಗಿದ್ದಾರೆ. ಅವರ ಸಂಘಟನೆಯು ಅಮೆರಿಕದಲ್ಲಿರುವ ಭಾರತೀಯ ಅಮೆರಿಕನ್ನರ ಹಿತಾಸಕ್ತಿಗಳಿಗಾಗಿ ಹೋರಾಡುತ್ತಿದೆ.

ಜನಾಂಗೀಯ ತಾರತಮ್ಯದ ವಿರುದ್ಧ ಅಜ್ಜನ ಹೋರಾಟ

1940ರ ದಶಕದಲ್ಲಿ, ಸಬ್ರಿನಾ ಸಿಂಗ್‌ರ ಅಜ್ಜ ಜೆ.ಜೆ. ಸಿಂಗ್ ಹಾಗೂ ಇತರ ಭಾರತೀಯರ ಸಣ್ಣ ಗುಂಪೊಂದು ಅಮೆರಿಕದ ಜನಾಂಗೀಯ ತಾರತಮ್ಯಕಾರಿ ನೀತಿಗಳ ವಿರುದ್ಧ ರಾಷ್ಟ್ರವ್ಯಾಪಿ ಚಳವಳಿ ನಡೆಸಿತ್ತು. ಇದರ ಫಲವಾಗಿ 1946 ಜುಲೈ 2ರಂದು ಅಮೆರಿಕ ಅಂದಿನ ಅಧ್ಯಕ್ಷ ಹ್ಯಾರಿ ಟ್ರುಮನ್ ಲೂಸ್-ಸೆಲ್ಲರ್ ಕಾನೂನಿಗೆ ಸಹಿ ಹಾಕಿದರು. ಈ ಕಾನೂನು ವರ್ಷಕ್ಕೆ 100 ಭಾರತೀಯರಿಗೆ ಅಮೆರಿಕಕ್ಕೆ ವಲಸೆ ಹೋಗಲು ಅವಕಾಶ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News